

ಮಡಿಕೇರಿ: ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಆರಂಭವಾಗಿರುವ ಹುತಾತ್ಮರ ಚೌಕ ನಿರ್ಮಾಣ ಕಾಮಗಾರಿಗೆ ನೆರವು ನೀಡಲು ಸಿದ್ಧ. ಆದರೆ, ಸಮಾಜದ ಎಲ್ಲರೂ ಇದರಲ್ಲಿ ಕೈಜೋಡಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ತಿಳಿಸಿದರು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪದವಿ ಹಂತದ ೨ನೇ ಚತುರ್ಮಾಸದ ಕೊಡವ ಪಠ್ಯಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಯಾರೊ ಒಬ್ಬರು ನೆರವು ನೀಡಿದರೆ ಅದು ಒಬ್ಬರ ಸ್ವತ್ತಾಗುತ್ತದೆ. ಆದರೆ, ಸಮಾಜದ ಎಲ್ಲರೂ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದರೆ ಎಲ್ಲರಲ್ಲೂ ಸ್ಮಾರಕ ನಮ್ಮದು ಎನ್ನುವ ಭಾವನೆ ಬರುವಂತಾಗುತ್ತದೆ. ಹಾಗಾಗಿ, ಇಂತಹ ಮಹತ್ವದ ಕಾರ್ಯಕ್ಕೆ ಎಲ್ಲರೂ ಕೈಜೋಡಿಸುವ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.
ಈ ಹುತಾತ್ಮರ ಚೌಕ ಅಪರೂಪದ ತಾಣವಾಗಲಿದೆ. ದೇಶ ರಕ್ಷಣೆಗಾಗಿ ಹುತಾತ್ಮರಾದ ಕೊಡಗು ಜಿಲ್ಲೆಯ ಎಲ್ಲ ಯೋಧರ ಹೆಸರು ಹಾಗೂ ಅವರು ವಿವರಗಳನ್ನು ಫಲಕಗಳಲ್ಲಿ ಹಾಕಲಾಗುತ್ತದೆ. ಇದನ್ನು ನೋಡಿ, ಹುತಾತ್ಮರನ್ನು ನೆನೆಯುವುದು, ಅವರಿಗೆ ಗೌರವ ಸಮರ್ಪಿಸುವ ಕಾರ್ಯ ಆಗಬೇಕು. ಈ ನಿಟ್ಟಿನಲ್ಲಿ ಹುತಾತ್ಮರ ಚೌಕ ನಿರ್ಮಾಣ ಅತ್ಯಂತ ಮಹತ್ವದ್ದು ಎಂದು ಹೇಳಿದರು.
ಇದು ಸುಮಾರು ೮೦೦ ಚದರಡಿ ವಿಸ್ತೀರ್ಣದಲ್ಲಿದ್ದು ಗ್ರಾನೈಟ್ ಕಲ್ಲಿನಲ್ಲಿ ವಾಲ್ ಆಫ್ ಫೇಮ್ ಕಟ್ಟಲಾಗುತ್ತಿದೆ. ವೀರ ಯೋಧರ ಬಗ್ಗೆ ಗೌರವ ಮೂಡಿಸುವ ಇಂತಹ ಪ್ರಯತ್ನಗಳು ಹೆಚ್ಚು ಹೆಚ್ಚು ನಡೆಯಬೇಕು. ಕಾಲೇಜಿನ ಸುತ್ತ ಸುಸಜ್ಜಿತವಾದ ಕಾಂಪೌಂಡ್ ನಿರ್ಮಿಸಲಾಗುವುದು. ಕಾಲೇಜಿನಲ್ಲಿ ೪ ಕೊಠಡಿಗಳನ್ನು ನಿರ್ಮಿಸಲು ಕಾರ್ಪೋರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿ ನಿಧಿ (ಸಿಎಸ್‌ಆರ್ ಫಂಡ್) ಅಡಿಯಲ್ಲಿ ನಿರ್ಮಾಣ ಕೈಗೊಳ್ಳಬಹುದು ಎಂದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ.ಪಾರ್ವತಿ ಅಪ್ಪಯ್ಯ ಮಾತನಾಡಿ, ಕಾಲೇಜಿನಲ್ಲಿ ಡಿಪ್ಲೊಮಾ ಅಡ್ವಾನ್ಸಡ್ ಡಿಪ್ಲೊಮಾ, ಪಿ.ಜಿ.ಡಿಪ್ಲೊಮಾ, ಸ್ನಾತಕೋತ್ತರ ವಿಭಾಗಗಳು ಆರಂಭವಾಗಿವೆ. ಇದರಲ್ಲಿ ಸ್ನಾತಕೋತ್ತರ ವಿಭಾಗಕ್ಕೆ ಮಾತ್ರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಎಲ್ಲ ಕೋರ್ಸ್‌ಗಳ ಪಠ್ಯಪುಸ್ತಕಗಳು ಸಿದ್ಧವಿದ್ದು, ವಿದ್ಯಾರ್ಥಿಗಳು ಕೋರ್ಸ್‌ಗಳಿಗೆ ಪ್ರವೇಶ ಪಡೆದು ಸದುಪಯೋಗಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ.ಜಗತ್ ತಿಮ್ಮಯ್ಯ, ಕೊಡವ ಸ್ನಾತಕೋತ್ತರ ವಿಭಾಗದ ಸಂಯೋಜಕ ಎಂ.ಎನ್.ರವಿಶಂಕರ್, ಮಂಗಳೂರು ವಿ.ವಿ ಕೊಡವ ಪಠ್ಯಕ್ರಮ ರಚನಾ ಸಮಿತಿ ಸಂಚಾಲಕ ಚಂದ್ರು ಹೆಗಡೆ, ಇಂಗ್ಲಿಷ್ ವಿಭಾಗದ ಸಂಯೋಜಕ ಕೆ.ಎಂ.ಪೂಣಚ್ಚ ಇದ್ದರು.