

ತುಮಕೂರು: ಶಿರಾ ಉಪಸಮರದ ಫಲಿತಾಂಶ ನ.10ರಂದು ಹೊರಬೀಳಲಿದೆ. ಮತ ಎಣಿಕೆಗೆ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಕೊಠಡಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ.
ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, 11ರ ಹೊತ್ತಿಗೆ ಸ್ಪಷ್ಟಚಿತ್ರಣ ಸಿಗಲಿದೆ. ನ.3 ರಂದು ನಡೆದ ಮತದಾನದಲ್ಲಿ ಶೇ.84.54 ರಷ್ಟು ಮತದಾನವಾಗಿತ್ತು. ಕ್ಷೇತ್ರದಲ್ಲಿ ಒಟ್ಟು 2,15,725 ಮತದಾರರಲ್ಲಿ 4821 ಅಂಚೆ ಮತ ಸೇರಿ ಒಟ್ಟು 1,82,374 ಮತದಾರರು ಹಕ್ಕು ಚಲಾಯಿಸಿದ್ದರು.
14 ಟೇಬಲ್ ವ್ಯವಸ್ಥೆ: ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಇವಿಎಂ ಮತ ಎಣಿಕೆಗೆ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬ ಸೂಪರ್‌ವೈಸರ್, ಒಬ್ಬ ಸಹಾಯಕ ಹಾಗೂ ಒಬ್ಬ ಮೈಕ್ರೋ ಅಬ್ಸರ್ವರ್ ಅನ್ನು ನೇಮಕ ಮಾಡಲಾಗಿದೆ. ಅಂಚೆ ಮತಯಂತ್ರ ಹಾಗೂ ಸರ್ವೀಸ್ ವೋಟ್‌ಗಳ ಎಣಿಕೆಗೆ 4 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಒಂದು ಕೊಠಡಿಯಲ್ಲಿ 7 ಟೇಬಲ್ ಮಾತ್ರ ಅಳವಡಿಸಲು ಚುನಾವಣಾ ಆಯೋಗ ಸೂಚಿಸಿದ್ದು, 14 ಟೇಬಲ್‌ನಲ್ಲಿ ಇವಿಎಂ ಮತ ಎಣಿಕೆ ಹಾಗೂ ಮತ್ತೊಂದು ಕೊಠಡಿಯ 3 ಟೇಬಲ್‌ನಲ್ಲಿ ಅಂಚೆ ಮತ ಎಣಿಕೆ ನಡೆಯಲಿದೆ.
24 ಸುತ್ತಿನ ಮತ ಎಣಿಕೆ: ಸುಮಾರು 24 ಸುತ್ತಿನಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿ ಟೇಬಲ್‌ಗೆ ಒಬ್ಬ ಅಭ್ಯರ್ಥಿಗೆ ಒಬ್ಬ ಏಜೆಂಟ್‌ನಂತೆ ಹಾಜರಿರಲು ಅವಕಾಶ ನೀಡಲಾಗುವುದು. ಈಗಾಗಲೇ ಮತ ಎಣಿಕೆ ಏಜೆಂಟರುಗಳಿಗೆ ಪಾಸ್ ವಿತರಿಸಲಾಗಿದೆ. ಪಾಸ್‌ಗಳನ್ನು ತಂದವರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟರುಗಳಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದ್ದು, ಅಭ್ಯರ್ಥಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಕೇಂದ್ರಕ್ಕೆ ಆಗಮಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.
ಮೊಬೈಲ್, ಕ್ಯಾಮರಾ ನಿಷೇಧ: ಮತ ಎಣಿಕಾ ಕೇಂದ್ರಕ್ಕೆ ಮೊಬೈಲ್, ಕ್ಯಾಮರಾ ಮತ್ತಿತರ ವಸ್ತುಗಳನ್ನು ತರಲು ಅವಕಾಶವಿರುವುದಿಲ್ಲ. ಮಾಧ್ಯಮ ಕೇಂದ್ರಕ್ಕೆ ಆಗಮಿಸುವ ಮಾಧ್ಯಮ ಪ್ರತಿನಿಧಿಗಳಿಗೆ ಮೊಬೈಲ್ ತರಲು ವಿನಾಯತಿ ನೀಡಲಾಗಿದೆ. ಮತ ಎಣಿಕಾ ಫಲಿತಾಂಶವನ್ನು ವೀಕ್ಷಿಸಲು ಮಾಧ್ಯಮ ಪ್ರತಿನಿಧಿಗಳ ಅನುಕೂಲಕ್ಕೆ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದೆ. ಪ್ರತಿ ಸುತ್ತಿನ ಮತ ಎಣಿಕೆ ಮಾಹಿತಿಯನ್ನು ಪ್ರದರ್ಶಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
4,821 ಅಂಚೆ ಮತಗಳು: ಶಿರಾ ಉಪಸಮರದಲ್ಲಿ ದಾಖಲೆಯ ಬರೋಬ್ಬರಿ 4,821 ಅಂಚೆ ಮತಗಳು ಚಲಾವಣೆಯಾಗಿದ್ದು, ಚುನಾವಣಾ ಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಕರೊನಾ ಕಾರಣಕ್ಕೆ 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರಿಗೆ ಅಂಚೆ ಮತದಾನ ಮಾಡಲು ಚುನಾವಣಾ ಆಯೋಗ ವಿಶೇಷ ಅವಕಾಶ ನೀಡಿತ್ತು. ನೋಂದಣಿಯಾದ 5,100 ಮತದಾರರ ಪೈಕಿ 4,821 ಅಂಚೆಮತ ಸಲ್ಲಿಕೆಯಾಗಿದ್ದವು.