

ಚಳ್ಳಕೆರೆ: ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವ ದೃಷ್ಟಿಕೋನದಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವರ್ಷಕ್ಕೆ ಮೂರು ಬಾರಿ ಪರೀಕ್ಷೆ ನಡೆಸುವ ದಿಟ್ಟ ಕ್ರಮಕೈಗೊಂಡಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ, ರಾಜ್ಯ ಶಿಕ್ಷಣ ಪರಿಷತ್ ಸಹಯೋಗದಲ್ಲಿ ನಗರದ ರೋಟರಿ ಬಾಲಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ ಮತ್ತು ಪ್ರೌಢಶಾಲೆ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳ ಪರಿಣಾಮಕಾರಿ ಶಿಕ್ಷಣ ಪ್ರಗತಿಗಾಗಿ ಮೂರು ಬಾರಿ ಪರೀಕ್ಷೆ ನಡೆಸುವುದು ಅನುಕೂಲವಾಗಲಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಪ್ರಗತಿಪರ ಬದಲಾವಣೆ ಕಂಡುಕೊಳ್ಳಲು ಸಾಧ್ಯವಾಗಲಿದೆ. ಇದೊಂದು ಮಾದರಿ ಕಾರ್ಯ ಎಂದು ಹೇಳಿದರು.
ಪರಿಸ್ಥಿತಿ ಮತ್ತು ಇನ್ಯಾವುದೋ ಕಾರಣಕ್ಕೆ ಅನುತ್ತೀರ್ಣರಾಗುವ ವಿದ್ಯಾರ್ಥಿಗಳು ಎದೆಗುಂದಬಾರದು ಎಂಬ ದೂರದೃಷ್ಟಿಯಿಂದ ಸರ್ಕಾರ ಇಂತಹ ಕ್ರಮ ಕೈಗೊಂಡಿದೆ. ಬದಲಾಗುತ್ತಿರುವ ಸಮಾಜದಲ್ಲಿ ಶಿಕ್ಷಣ ಕ್ಷೇತ್ರದ ಸ್ಪರ್ಧೆ ಬೆಳೆಯುತ್ತಿದೆ. ಶೇ.100ರಷ್ಟು ಅಂಕ ತೆಗೆದುಕೊಳ್ಳುವ ರೀತಿಯಲ್ಲಿ ಮಕ್ಕಳನ್ನು ಪ್ರತಿಭಾವಂತರಾಗಿ ಬೆಳೆಸಬೇಕು. ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಶಿಕ್ಷಕರು ಆಧಾರ ಆಗಬೇಕು ಎಂದು ಹೇಳಿದರು.
ಉಪನ್ಯಾಸ ನೀಡಿದ ಡಾ.ಎಚ್.ವಿ.ಚಂದ್ರಶೇಖರ್ ಮಾತನಾಡಿ, ಬೋಧನೆಯಲ್ಲಿನ ಲೋಪ ಅರಿತು ಶಿಕ್ಷಕರು ಪಾಠ ಮಾಡಬೇಕು. ತನ್ನನ್ನು ತಾನು ವಿಮರ್ಶೆ ಮಾಡಿಕೊಳ್ಳುವ ರೀತಿಯಲ್ಲಿ ಶಿಕ್ಷಕ ಸಂಪನ್ಮೂಲ ವ್ಯಕ್ತಿ ಆಗಿರಬೇಕು ಎಂದರು.
ಪಠ್ಯವನ್ನು ಅಧ್ಯಯನ ಮಾಡಿಕೊಂಡೇ ಮಕ್ಕಳಿಗೆ ಬೋಧನೆ ಮಾಡುವ ಮನಸಾಕ್ಷಿ ಶಿಕ್ಷಕರಿಗಿರಬೇಕು. ಪಠ್ಯ ಜತೆಯಲ್ಲಿ ಸಾಮಾಜಿಕ ನೈತಿಕತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಶಿಕ್ಷಣ ಕಲಿಕೆಯಲ್ಲಿ ನಡೆಯಬೇಕು ಎಂದು ಹೇಳಿದರು.
ಬಿಇಒ ಕೆ.ಎಸ್.ಸುರೇಶ್ ಮಾತನಾಡಿ, ತಾಲೂಕಿನ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರ ಪರಿಶ್ರಮ ಇರಬೇಕು. ನಾಲ್ಕು ವರ್ಷಗಳಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲೂಕಿನವರು ಅರ್ಹರಾಗಿದ್ದಾರೆ. ಪ್ರಸಕ್ತ ವರ್ಷದ ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಶಾಲೆಯ ಶಿಕ್ಷಕ ಕೆ.ಟಿ.ನಾಗಭೂಷಣ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ವರ್ಷದ ಎಸ್ಸೆಸ್ಸೆಲ್ಸಿಯ ಉತ್ತಮ ಫಲಿತಾಂಶಕ್ಕೆ ಶಿಕ್ಷಕರು ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.
ರಾಜ್ಯ ಶಿಕ್ಷಣ ಪರಿಷತ್ ಅಧ್ಯಕ್ಷ ಎಸ್.ರವಿ ನಗರಂಗೆರೆ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ. ರಾಘವೇಂದ್ರ, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬಿ.ರಾಜಕುಮಾರ್, ಮುಖ್ಯಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಡಿ.ಟಿ.ಶ್ರೀನಿವಾಸನ್, ಪಾಲಯ್ಯ, ವೆಂಕಟೇಶರೆಡ್ಡಿ, ರುದ್ರಮುನಿ, ತಿಪ್ಪೇಸ್ವಾಮಿ, ಬಸವರಾಜು, ವೀರೇಶ್ ಮತ್ತಿತರರು ಇದ್ದರು.