

ಉಡುಪಿ: ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಜ.1ರಿಂದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭವಾಗಲಿದೆ. ಪಾಲಕರ ದೃಢೀಕರಣ ಪತ್ರದೊಂದಿಗೆ ವಿದ್ಯಾರ್ಥಿಗಳು ಹಾಜರಾಗಬೇಕಾಗಿದ್ದು, ಬೆಳಗ್ಗೆ 10 ರಿಂದ 1 ಗಂಟೆವರೆಗೆ ತರಗತಿಗಳು ನಡೆಯಲಿವೆ ಎಂದು ಜಿಪಂ ಸಿಇಒ ಡಾ.ನವೀನ್ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವುದು ಕಡ್ಡಾಯವಲ್ಲ. ಆನ್‌ಲೈನ್ ಮೂಲಕವೂ ಪಾಠ ಕೇಳಬಹುದು. ಶಿಕ್ಷಕರು 72 ಗಂಟೆ ಒಳಗಿನ ಕೋವಿಡ್ ಟೆಸ್ಟ್ ಪ್ರಮಾಣಪತ್ರ ಹೊಂದಿರಬೇಕು. 50 ವರ್ಷ ಮೇಲ್ಪಟ್ಟವರು ಫೇಸ್ ಶೀಲ್ಡ್ ಹಾಕಿಕೊಳ್ಳಬೇಕು. ಯಾವುದೇ ಕ್ರೀಡಾ ಚಟುವಟಿಕೆ ನಡೆಸುವಂತಿಲ್ಲ. ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ಖಾಸಗಿ ಬಸ್ ಮಾಲೀಕರ ಸಂಘದೊಂದಿಗೆ ಚರ್ಚಿಸಿ ಕ್ಯಾಶ್‌ಲೆಸ್ ಕಾರ್ಡ್ ಸೇವೆಯನ್ನು ವಿದ್ಯಾರ್ಥಿಗಳಿಗೂ ವಿಸ್ತರಿಸುವಂತೆ ಕೋರಲಾಗಿದೆ. ರೋಗ ಲಕ್ಷಣವಿರುವ ಮಕ್ಕಳನ್ನುಪ್ರತ್ಯೇಕವಾಗಿ ಕುಳ್ಳಿರಿಸಲು ಪ್ರತೀ ಶಾಲೆಯಲ್ಲಿ ಒಂದು ಕೊಠಡಿ ಮೀಸಲಿಡಲಾಗಿದೆ ಎಂದರು.
10ನೇ ತರಗತಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 290 ಶಾಲೆಗಳಲ್ಲಿ 15,829 ವಿದ್ಯಾರ್ಥಿಗಳಿದ್ದಾರೆ. ಪಿಯುಸಿಯಲ್ಲಿ 103 ಕಾಲೇಜುಗಳಲ್ಲಿ ಕಲಾ ವಿಭಾಗದಲ್ಲಿ 1592, ವಾಣಿಜ್ಯ ವಿಭಾಗದಲ್ಲಿ 7843, ವಿಜ್ಞಾನ ವಿಭಾಗದಲ್ಲಿ 5364 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್. ನಾಗೂರ ಉಪಸ್ಥಿತರಿದ್ದರು.
ವಿದ್ಯಾಗಮ ಪ್ರಾರಂಭ: 6 ರಿಂದ 9ನೇ ತರಗತಿವರೆಗೆ ವಿದ್ಯಾಗಮ-2 ತರಗತಿಗಳೂ ಜ.1ರಿಂದ ಆರಂಭವಾಗಲಿದೆ. ಶಾಲಾ ಆವರಣದಲ್ಲಿ 20 ಮಕ್ಕಳ ಪ್ರತ್ಯೇಕ ತಂಡಕ್ಕೆ ತರಗತಿ ನಡೆಯಲಿದೆ. 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಗ್ಗೆ 10 ರಿಂದ 1ರವರೆಗೆ, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 2 ರಿಂದ 4.30ರವರೆಗೆ ಸಮಯ ನಿಗದಿ ಮಾಡಲಾಗಿದೆ. ಈ ವಿಭಾಗದಲ್ಲಿ 870 ಶಾಲೆಗಳಲ್ಲಿ 63805 ವಿದ್ಯಾರ್ಥಿಗಳಿದ್ದು, 6057 ಮಂದಿ ಶಿಕ್ಷಕರು ಬೋಧನೆ ಮಾಡಲಿದ್ದಾರೆ ಎಂದರು.