ಲೋಕಸಭಾ ಚುನಾವಣೆಗೆ ಸಜ್ಜಾಗಿ : ಮೈಸೂರು ಡಿಸಿ ಡಾ.ಕೆ.ವಿ. ರಾಜೇಂದ್ರ ನಿರ್ದೇಶನ

dr. k.v rajendra mys dc
Published on

ಮೈಸೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯ ಅಡಿಯಲ್ಲಿ ಜಿಲ್ಲೆಯಾದ್ಯಂತ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಪ್ರತಿಯೊಬ್ಬ ಅಧಿಕಾರಿಗಳು ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಕಲಾಮಂದಿರದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಎಇಒ, ವಿವಿಟಿ, ಎಟಿ, ಇಟಿ, ಐಟಿ, ಎಂಸಿಎಂಸಿ ತಂಡಗಳ ತರಬೇತಿ ಕಾರ್ಯಕ್ರ ಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಲೋಕಸಭಾ ಚುನಾವಣೆಯು ಮಾರ್ಚ್ ತಿಂಗಳಲ್ಲಿ ಘೋಷಣೆಯಾಗುವ ಸಾಧ್ಯತೆಗಳಿದ್ದು, ಅದಕ್ಕೆ ಪೂರಕವಾದ ಸಿದ್ಧತೆ ಮಾಡಿಕೊಳ್ಳಬೇಕಿದೆ. ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸಲು ಅಧಿಕಾರಿಗಳ ತಂಡವನ್ನು ರಚಿಸಿ ನಿರ್ವಹಿಸ ಬೇಕಾಗಿರುವ ಕೆಲಸ ಕಾರ್ಯಗಳ ಪಟ್ಟಿಯನ್ನು ನೀಡಲಾಗುವುದು. ಅಧಿಕಾರಿ ಗಳು ತಮಗೆ ವಹಿಸುವ ಕೆಲಸವನ್ನು ಚಾಚೂತಪ್ಪದೆ ಪಾಲಿಸ ಬೇಕು ಎಂದು ಹೇಳಿದರು.

ಈ ಬಾರಿಯ ಲೋಕಸಭಾ ಚುನಾವಣೆಯು ಕಳೆದ ಚುನಾವಣೆಗಳಿಗಿಂತ ವಿಭಿನ್ನವಾಗಿರಲಿದ್ದು, ಶೇ.100 ರಷ್ಟು ನಮ್ಮ ಪ್ರಯತ್ನದಿಂದ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ಎಚ್ಚರಿಕೆಯಿಂದ ಯಶಸ್ವಿಯಾಗಿ ಮಾಡಬೇಕು. ಮಾದರಿ ನೀತಿ ಸಂಹಿತೆಯು ಚುನಾವಣೆ ಪ್ರಾರಂಭವಾಗಿ ಅದರ ಫಲಿತಾಂಶ ಪ್ರಕಟವಾಗುವವರೆಗೂ ಜಾರಿಯಲ್ಲಿರುವುದರಿಂದ ಆ ಸಮಯದಲ್ಲಿ ಅಧಿಕಾರಿಗಳು ಜಿಲ್ಲೆಯಾದ್ಯಂತ ಅವಶ್ಯಕತೆ ಇರುವ ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಬೇಕು. ಕಳೆದ ಬಾರಿ ಇದ್ದ ಸ್ಥಳದಲ್ಲೇ ಚೆಕ್‌ಪೋಸ್ಟ್ ನಿರ್ಮಿಸುವ ಬದಲು ಸೂಕ್ತ ಸ್ಥಳವನ್ನು ಆರಿಸಬೇಕು ಎಂದು ಸಲಹೆ ನೀಡಿದರು.

ಚುನಾವಣೆಯ ಅವಧಿಯಲ್ಲಿ ಯಾವುದೇ ರೀತಿಯ ಸಾರ್ವಜನಿಕ ಸಭೆ, ಸಮಾರಂಭಗಳು ಏರ್ಪಡದಂತೆ ನೋಡಿಕೊಳ್ಳಬೇಕು. ಅನಿವಾರ್ಯ ಕಾರ್ಯಕ್ರಮಗಳಿಗೆ ಪೊಲೀಸ್ ಅಧಿಕಾರಿಗಳ ಅನುಮತಿ ಕಡ್ಡಾಯವಾಗಿರಬೇಕು. ಈಗಾಗಲೇ ಜಿಲ್ಲೆಯಾದ್ಯಂತ ಇರುವ ಅನವಶ್ಯಕ ಹಾಗೂ ರಾಜಕೀಯಕ್ಕೆ ಸಂಬಂಧಿಸಿದ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸರ್ಕಾರಿ ಮತ್ತು ಅನುದಾನಿತ ಕಟ್ಟಡಗಳನ್ನು ಬಳಸಿಕೊಳ್ಳಬಾರದು. ಚುನಾವಣ ಸಭೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಅನುಮತಿ ಪಡೆಯಬೇಕು. ಸಾಮಾನ್ಯ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಚ್ಚರವಹಿಸಿ ಪ್ರಚಾರ ಕೈಗೊಳ್ಳಬೇಕು ಎಂದರು.

ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಪಕ್ಕದ ಕ್ಷೇತ್ರದ ಚುನಾವಣಾ ಅಧಿಕಾರಿಗಳೊಡನೆ ಸೌಹಾರ್ದತೆಯಿಂದ ನಡೆದುಕೊಂಡು, ಯಾವುದೇ ಕಾರಣಕ್ಕೂ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಇದರಿಂದ ಸಾರ್ವಜನಿಕರಿಗೂ ಯಾವುದೇ ತೊಂದರೆಯಾಗಬಾರದು ಎಂದರು.

ಚುನಾವಣೆ ಸಮಯದಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ಪ್ರತಿ ನಿಮಿಷವೂ ಶ್ರದ್ಧೆಯಿಂದ ಕಾರ್ಯನಿರ್ವಾಹಿಸಬೇಕು. ಸಣ್ಣ ನೆಪ ಹೇಳಿ ಗೈರಾಗುವುದು, ಕೆಲಸದ ಸಮಯದಲ್ಲಿ ಕಾಲಹರಣ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ರಮೇಶ್‌ ಬಾನೋತ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ವಿ.ಶಿವರಾಜು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net