

ಸದೇಶ್ ಕಾರ್ಮಾಡ್ ಮೈಸೂರು
ತಂತ್ರಜ್ಞಾನದ ಈ ಯುಗದಲ್ಲಿ ಆಬಾಲವೃದ್ಧರಾದಿಯಾಗಿ ಎಲ್ಲರೂ ಮೊಬೈಲ್ ಗೀಳಿನಲ್ಲಿ ಬಿದ್ದಿದ್ದು, ಜನರಲ್ಲಿ ಓದುವ ಹವ್ಯಾಸ ಕ್ಷೀಣಗೊಳ್ಳುತ್ತಿದೆ. ಓದುವ ಅಭಿರುಚಿ ಕಸಿದುಕೊಂಡ ಮೊಬೈಲ್‌ಅನ್ನೇ ಬಳಕೆ ಮಾಡಿಕೊಂಡು ಜನರಲ್ಲಿ ಮತ್ತೆ ಓದುವ ಅಭಿರುಚಿ ಬೆಳೆಸುವ ವಿಶೇಷ ಪ್ರಯತ್ನವೊಂದು ಸಾಂಸ್ಕೃತಿಕ ನಗರಿಯಲ್ಲಿ ಪ್ರಾರಂಭಗೊಂಡಿದೆ.
ಇಂತಹದ್ದೊಂದು ವಿಶೇಷ ಪ್ರಯತ್ನಕ್ಕೆ ಕೈ ಹಾಕಿದವರು ಕುವೆಂಪುನಗರದ ಬಿಜಿಎಸ್ ಕಾಲೇಜಿನ ಬಿಕಾಂ ವಿದ್ಯಾರ್ಥಿ ಕಿರಣ್ ಪಿ. ಕೌಶಿಕ್. ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ‘ಮೈಸೂರಿನ ಸಾಹಿತ್ಯ ಓದುಗರು’ ಪೇಜ್ ತೆರೆದ್ದು, ಈ ಪೇಜ್ ಮೂಲಕ ಜನರನ್ನು ಮತ್ತೆ ಓದಿನ ಕಡೆಗೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ಪುಸ್ತಕ ಓದುವ ಆಸಕ್ತಿ ಹೊಂದಿರುವ ಸಾಕಷ್ಟು ಜನರು ‘ಮೈಸೂರಿನ ಸಾಹಿತ್ಯ ಓದುಗರು’ ವೇದಿಕೆಯ ಮೂಲಕ ಪ್ರತಿ 20 ದಿನಗಳಿಗೆ ಒಮ್ಮೆ (ಭಾನುವಾರ) ಆಕಾಶವಾಣಿ ವೃತ್ತದ ಬಳಿ ಇರುವ ಚೆಲುವಾಂಬ ಉದ್ಯಾನದಲ್ಲಿ ಸೇರುತ್ತಾರೆ. ಎಲ್ಲರು ತಾವು ತಂದ ಪುಸ್ತಕಗಳನ್ನು ಈ ಉದ್ಯಾನದಲ್ಲಿ ಕುಳಿತು ಓದುತ್ತಾರೆ. ಬೆಳಗ್ಗೆ 10 ರಿಂದ 12 ಗಂಟೆಯವರೆಗೆ ಸಾಹಿತ್ಯದ ಓದು ನಡೆಯುತ್ತದೆ. ಓದಿದ ನಂತರ ಕೃತಿಗಳ ಕುರಿತು ಚರ್ಚೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ರಸಪ್ರಶ್ನೆಗಳನ್ನು ಏರ್ಪಡಿಸಲಾಗುತ್ತದೆ. ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಕೃತಿಯನ್ನು ಬಹುಮಾನವಾಗಿ ನೀಡಲಾಗುತ್ತಿದೆ.
ಯುವತಲೆಮಾರು ಓದಿನಿಂದ ವಿಮುಖರಾಗುತ್ತಿದ್ದಾರೆ ಎಂಬ ಮಾತು ಸರ್ವೇ ಸಾಮಾನ್ಯ. ಆದರೆ, ‘ಮೈಸೂರಿನ ಸಾಹಿತ್ಯ ಓದು ಗರು’ ವೇದಿಕೆ ಹಮ್ಮಿಕೊಳ್ಳುವ ಸಾಹಿತ್ಯದ ಓದಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಪಾಲ್ಗೊಳ್ಳುತ್ತಿರುವುದು ವಿಶೇಷ. ಯುವಜನರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಉದ್ಯಾನದಲ್ಲಿ ಸಾಹಿತ್ಯ ಓದಿನಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭಗೊಂಡ ‘ಮೈಸೂರಿನ ಸಾಹಿತ್ಯ ಓದುಗರು’ ವೇದಿಕೆಯು ಕೇವಲ ಮೂರು ತಿಂಗಳ ಅವಧಿಯಲ್ಲಿ 180 ಜನರನ್ನು ತನ್ನತ್ತ ಸೆಳೆದಿದೆ.
ಜನರಲ್ಲಿ ಮತ್ತೆ ಓದಿನ ಅಭಿರುಚಿ ಮೂಡಿಸಲು ಉದ್ಯಾನದಲ್ಲಿ ಸಾಹಿತ್ಯ ಓದುವ ಚಟುವಟಿಕೆಯನ್ನು ಮೊದಲು ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಪ್ರಾರಂಭಿಸಲಾಯಿತು. ಬೆಂಗಳೂರಿನಲ್ಲಿ ಸಾಹಿತ್ಯ ಓದು ಚಟುವಟಿಕೆಗೆ ಉತ್ತಮ ಸ್ಪಂದನೆ ದೊರೆಯಲು ಪ್ರಾರಂಭವಾಗಿದೆ. ಇದರಿಂದ ಪ್ರೇರಿತರಾದ ಕಿರಣ್ ಪಿ. ಕೌಶಿಕ್ ಬೆಂಗಳೂರು ಮಾದರಿಯಲ್ಲಿ ಮೈಸೂರಿನಲ್ಲಿ ಸಾಹಿತ್ಯ ಓದು ಚಟುವಟಿಕೆ ಪ್ರಾರಂಭಿಸಿ ಯಶಸ್ಸು ಕಂಡಿದ್ದಾರೆ. ಜನರನ್ನು ಮತ್ತೆ ಸಾಹಿತ್ಯದ ಓದಿನ ಕಡೆಗೆ ಸೆಳೆಯಲು ಕಿರಣ್ ಪಿ. ಕೌಶಿಕ್ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ಅನ್ನು ಪ್ರಚಾರ ಮಾಧ್ಯಮವಾಗಿ ಬಳಸಿದರು. ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನ ಪೋಸ್ಟ್ ನೋಡಿಕೊಂಡೇ ಎಲ್ಲರು ಚೆಲುವಾಂಬ ಉದ್ಯಾನದತ್ತ ಮುಖ ಮಾಡಿದ್ದಾರೆ. ಮೊಬೈಲ್‌ಅನ್ನು ಉತ್ತಮ ಚಟುವಟಿಕೆಗಳಿಗೆ ಹೇಗೆ ಪರಿಣಾಮಕಾರಿಯಾಗಿ ಬಳಕೆ ಮಾಡಬಹುದು ಎಂಬುದಕ್ಕೆ ಕಿರಣ್ ಪಿ. ಕೌಶಿಕ್ ಮಾದರಿಯಾಗಿದ್ದಾರೆ.
‘ಮೈಸೂರಿನ ಸಾಹಿತ್ಯ ಓದುಗರು’ ವೇದಿಕೆಯ ಮೂಲಕ ಇದುವರೆಗೆ 4 ಬಾರಿ ಸಾಹಿತ್ಯಾಭಿಮಾನಿಗಳು ಒಂದೆಡೆ ಸೇರಿ ಪುಸ್ತಕವನ್ನು ಓದಿದ್ದಾರೆ. ಮೊದಲ ಭೇಟಿಯ ಸಂದರ್ಭ ಕಿರಣ್ ಪಿ. ಕೌಶಿಕ್ ವೈಯಕ್ತಿಕವಾಗಿ ಯಾರಿಗೂ ಆಹ್ವಾನ ನೀಡಿರಲಿಲ್ಲ. ಮೊದಲ ಭೇಟಿಯಲ್ಲಿ 5 ಜನರು ಒಂದೆಡೆ ಸೇರಿ ಪುಸ್ತಕಗಳನ್ನು ಓದಿದರು. ಈ ಐವರು ಒಬ್ಬರಿಗೊಬ್ಬರು ಪರಿಚಿತರಲ್ಲ ಎಂಬುದು ವಿಶೇಷ. 4ನೇ ಭೇಟಿಯಲ್ಲಿ 70 ಜನರು ಪಾಲ್ಗೊಳ್ಳುವ ಆಸಕ್ತಿ ತೋರಿ 35 ಜನರು ಪಾಲ್ಗೊಂಡರು. ‘ಮೈಸೂರಿನ ಸಾಹಿತ್ಯ ಓದುಗರು’ ವೇದಿಕೆಯ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಪೇಜ್ ಜತೆಗೆ ವಾಟ್‌ಆ್ಯಪ್ ಗ್ರೂಪ್ ಸಹ ಇದ್ದು, ಈ ಗ್ರೂಪ್‌ನಲ್ಲಿ 180 ಜನರು ಇದ್ದಾರೆ.
‘ಮೈಸೂರಿನ ಸಾಹಿತ್ಯ ಓದುಗರು’ ವೇದಿಕೆಯ ಮೂಲಕ ಮುಂದಿನ ದಿನಗಳಲ್ಲಿ ಪುಸ್ತಕಗಳನ್ನು ಹೊರ ತರುವ ಹಾಗೂ ಕೃತಿಗಳ ಬಿಡುಗಡೆ ಸಮಾರಂಭವನ್ನು ಏರ್ಪಡಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೆ, ಕುವೆಂಪು ಸೇರಿದಂತೆ ವಿವಿಧ ಸಾಹಿತಿಗಳ ಮನೆಗಳಿಗೆ ಪ್ರವಾಸ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಪುಸ್ತಕ ಓದುವ ಅಭಿರುಚಿ ಹೊಂದಿರುವವರು ಈ ಬಳಗವನ್ನು ಸೇರಿಕೊಳ್ಳಬಹುದು.
ಜನರಲ್ಲಿ ಇತ್ತೀಚೆಗೆ ಓದುವ ಅಭಿರುಚಿ ಕಡಿಮೆ ಆಗುತ್ತಿದ್ದು, ಮತ್ತೆ ಓದುವ ಅಭಿರುಚಿ ಬೆಳೆಸಲು ‘ಮೈಸೂರಿನ ಸಾಹಿತ್ಯ ಓದುಗರು’ ವೇದಿಕೆ ಮೂಲಕ ಪುಸ್ತಕ ಓದುವ ಚಟುವಟಿಕೆಯನ್ನು ಪ್ರಾರಂಭಿಸಿದ್ದೇನೆ. ಇದಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಎಲ್ಲರು ಸ್ವಯಂ ಪ್ರೇರಿತರಾಗಿ ಆಗಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ವೇದಿಕೆಯ ಮೂಲಕ ಮತ್ತಷ್ಟು ಸಾಹಿತ್ಯದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಲಾಗಿದೆ.
ಕಿರಣ್ ಪಿ. ಕೌಶಿಕ್, ‘ಮೈಸೂರಿನ ಸಾಹಿತ್ಯ ಓದುಗರು’ ಪೇಜ್ ಅಡ್ಮಿನ್