

ಬಾಳೆಹೊನ್ನೂರು: ವಿದ್ಯಾರ್ಥಿಗಳು ನಿರಂತರವಾಗಿ ದಿನ ಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ ಹೆಚ್ಚುವುದರ ಜತೆಗೆ ಓದಿನಲ್ಲಿ ಉತ್ತಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಎಸ್‌ಡಿಎಂಸಿ ಸದಸ್ಯ ಓ.ಡಿ.ಸ್ಟೀಫನ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕುವೈತ್ ಉದ್ಯಮಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಕೊಡುಗೆಯಾಗಿ ನೀಡಿದ ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿ, ದಿನಪತ್ರಿಕೆಗಳು ಜ್ಞಾನದ ಭಂಡಾರವಾಗಿದ್ದು, ನಿತ್ಯ ಪತ್ರಿಕೆ ಓದುವುದರಿಂದ ಹಲವು ವಿಚಾರಗಳು ವಿದ್ಯಾರ್ಥಿಗಳಿಗೆ ತಿಳಿಯಲಿದೆ. ದಿನಪತ್ರಿಕೆಗಳಲ್ಲಿ ಸ್ಥಳೀಯ ಸುದ್ದಿಯಿಂದ ಹಿಡಿದು, ರಾಜ್ಯ,ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಸುದ್ದಿಗಳು ಸಹ ಪ್ರತ್ಯೇಕ ಪುಟಗಳಲ್ಲಿ ಇರಲಿದೆ.
ವಿಜಯವಾಣಿ ಪತ್ರಿಕೆ ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ವಿದ್ಯಾರ್ಥಿ ಮಿತ್ರ ಹೊರತಂದಿರುವುದು ಶ್ಲಾಘನೀಯ. ಇದನ್ನು ನಿತ್ಯವೂ ವಿದ್ಯಾರ್ಥಿಗಳು ಓದಿದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಿದೆ.
ಈ ನಿಟ್ಟಿನಲ್ಲಿ ಕುವೈತ್‌ನ ಉದ್ಯಮಿ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಅವರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಮಿತ್ರವನ್ನು ಕೊಡುಗೆಯಾಗಿ ನೀಡುವುದಾಗಿ ವಾಗ್ದಾನ ಮಾಡಿದ್ದಾರೆ. ಅವರ ಈ ಸೇವೆ ಶ್ಲಾಘನೀಯ. ಸರ್ಕಾರಿ ಪ್ರೌಢಶಾಲೆಯಲ್ಲಿ ನುರಿತ ಶಿಕ್ಷಕರು, ಸಿಬ್ಬಂದಿಗಳಿದ್ದು, ವಿದ್ಯಾರ್ಥಿಗಳಿಗೆ ಉತ್ತಮವಾಗಿ ಬೋಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಶಿಕ್ಷಕರಿಂದ ಒಳ್ಳೆಯ ಮಾಹಿತಿ ಪಡೆದುಕೊಂಡು ಉತ್ತಮ ಶಿಕ್ಷಣ ಪಡೆಯಬೇಕಿದೆ ಎಂದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ವಿಜಯವಾಣಿ ವಿತರಕ ಬಿ.ಎಸ್.ನಾಗರಾಜ್ ಭಟ್, ಮುಖ್ಯಶಿಕ್ಷಕ ಕೊಟ್ರೇಶಪ್ಪ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜಯಕುಮಾರ್, ಜೇಸಿಐ ಮಾಜಿ ಅಧ್ಯಕ್ಷ ಬಿ.ಎಚ್.ಮನುಕುಮಾರ್ ಮತ್ತಿತರರು ಹಾಜರಿದ್ದರು.