

ಕೆ.ಎಂ.ದೊಡ್ಡಿ: ವಿದ್ಯಾರ್ಥಿಗಳು ಪತ್ರಿಗೆಳನ್ನು ಪ್ರತಿ ದಿನ ಓದಿದರೆ ಸಾಮಾನ್ಯ ಜ್ಞಾನ ಹೆಚ್ಚುವುದರ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಹಕಾರಿಯಾಗುತ್ತದೆ ಎಂದು ಮಂಡ್ಯದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಕಿವಿಮಾತು ಹೇಳಿದರು.
ಭಾರತಿ ಕಾಲೇಜು (ಸ್ವಾಯತ್ತ) ಸ್ನಾತಕೋತರ ಮತ್ತು ಸಂಶೋಧನಾ ಕೇಂದ್ರ, ಅರ್ಥಶಾಸ್ತ್ರ, ಇಂಗ್ಲಿಷ್ ವಿಭಾಗ, ಭಾರತಿ ವಾರ್ಷಿಕ ನಿಯತಕಾಲಿಕೆ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ, ಭಾರತೀ ಐಎಎಸ್ ಅಕಾಡೆಮಿ ಮತ್ತು ಐಕ್ಯುಎಸಿ ಸಹಯೋಗದೊಂದಿಗೆ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ತಾಣಗಳ ಮೊರೆ ಹೋಗಿ ವಿದ್ಯಾರ್ಥಿಗಳು ತಮ್ಮ ಉತ್ತಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ದಿನಪತ್ರಿಕೆಗಳಿಂದ ಉಪಯುಕ್ತ ಮಾಹಿತಿ ದೊರೆಯುವುದರ ಜತೆಗೆ ವಿದ್ಯಾರ್ಥಿಗಳ ಮೌಲ್ಯ ಹೆಚ್ಚುತ್ತದೆ ಎಂದರು.
ಬ್ಯಾಂಕ್, ರೈಲ್ವೆ ಮೊದಲಾದ ಹುದ್ದೆಗಳಲ್ಲಿ ಶೇ.80ಕ್ಕೂ ಹೆಚ್ಚಿನವರು ಉತ್ತರ ಭಾರತದವರೇ ಆಗಿದ್ದಾರೆ. ಕಾರಣ ಅವರ ಸತತ ಅಭ್ಯಾಸ. ಹಾಗಾಗಿ ವಿದ್ಯಾರ್ಥಿ ದಿಸೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ಪ್ರತಿಕೆಗಳು ಮತ್ತು ಪೂರಕವಾದ ಪುಸ್ತಕಗಳನ್ನು ಕೊಂಡುಕೊಂಡು ಓದಬೇಕೆಂದರು.
ಬಳಿಕ ವಿಧಾನ ಪರಿಷತ್ ಸದಸ್ಯ, ಭಾರತೀ ಎಜುಕೇಷನ್ ಟ್ರಸ್ಟ್ ಚೇರ‌್ಮನ್ ಮಧು ಜಿ.ಮಾದೇಗೌಡ ಮಾತಾನಾಡಿ, ಸಂಸ್ಥೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಐಎಎಸ್ ಅಕಾಡೆಮಿ ತೆರೆಯಲಾಗಿದ್ದು ಪ್ರಸಕ್ತ ವರ್ಷದಿಂದ ಬಿಎ, ಬಿಎಸ್ಸಿ, ಬಿಕಾಂ ಮತ್ತು ಬಿಸಿಎ ಪದವಿಯ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂಟಿಗ್ರೇಟೆಡ್ ಕೋರ್ಸ್ ಪ್ರಾರಂಭಿಸಲಾಗುವುದು ಎಂದರು.
ಯುಪಿಎಸ್‌ಇ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದಿರುವ ನಮ್ಮ ಕಾಲೇಜಿನ ವಿದ್ಯಾರ್ಥಿ ಚಂದನ್ ಮಾದರಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಶ್ರಮ ಹಾಕಿದರೆ ನಿಮಗೆ ಪ್ರತಿಫಲ ದೊರೆಯುತ್ತದೆ ಎಂದರು. ಇದೇ ವೇಳೆ ಭಾರತಿ ಕಾಲೇಜು (ಸ್ವಾಯತ್ತ) ಸ್ನಾತಕೋತರ ಮತ್ತು ಸಂಶೋಧನಾ ಕೇಂದ್ರ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಲಾಯಿತು.
ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಭಾರತೀ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಎಸ್. ನಾಗರಾಜ, ಭಾರತೀ ಕಾಲೇಜಿನ ಪ್ರಾಂಶುಪಾಲ ಪಿ.ನಾಗೇಂದ್ರ, ಐಕ್ಯೂಎಸಿ ಸಂಯೋಜಕ ಪ್ರೊ.ಎಸ್.ರೇವಣ್ಣ, ವಿಭಾಗದ ಮುಖ್ಯಸ್ಥ ಪ್ರೊ. ಎಂ.ಪುಟ್ಟಸ್ವಾಮಿಗೌಡ, ಅಕಾಡೆಮಿಯ ಸಂಯೋಜಕ ಕಳ್ಳಿಮೆಳ್ಳೆದೊಡ್ಡಿ ಪ್ರಸನ್ನಕುಮಾರ, ಕೆ.ಭಾರತಿ, ಡಾ.ಎಂ.ಎಸ್.ಮಹದೇವಸ್ವಾಮಿ, ಡಾ.ಮರಯ್ಯ, ಡಾ.ಪುನೀತ್, ನಿಜಲಿಂಗು, ಅರ್ಚನಾ, ಎಸ್.ಗೀತಾ, ಕೆ.ಎಚ್. ಲಕ್ಷ್ಮೀ ಸೇರಿದಂತೆ ಮತ್ತಿತರರಿದ್ದರು.