

ಮೈಸೂರು: ಆಧುನಿಕ ಕಾಲಘಟ್ಟದಲ್ಲಿ ಓದುವ ಹವ್ಯಾಸ ತಗ್ಗಿದೆ. ಗ್ರಂಥಾಲಯಕ್ಕೆ ಹೋಗುವ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಕಳವಳ ವ್ಯಕ್ತಪಡಿಸಿದರು.
ಜನಜಾಗರಣ ಟ್ರಸ್ಟ್ ಹಾಗೂ ಮಂಥನ ಮೈಸೂರು ಸಂಸ್ಥೆ ಸಹಯೋಗದಲ್ಲಿ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಜಿ.ಬಿ.ಹರೀಶ್ ಅವರ ‘ಎಲ್ಲರಿಗೂ ಬೇಕಾದ ಅಂಬೇಡ್ಕರ್- ಗೊತ್ತೇ ಇರದ ಅದೆಷ್ಟೋ ಸಂಗತಿಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಂಥಾಲಯಕ್ಕೆ ಹೋಗಿ ಓದುವಂತೆ ಹೇಳಿದರೆ ಇ-ಬುಕ್, ಇ-ಜರ್ನಲ್ ಇದೆ ಎಂದು ಸಬೂಬು ಹೇಳುತ್ತಿದ್ದಾರೆ. ಆದರೆ, ಇ-ಬುಕ್ ಮತ್ತು ಇ-ಜರ್ನಲ್‌ಗಳಿಂದ ಸಾಮಾನ್ಯ ಪುಸ್ತಕವನ್ನು ಓದಿದಂತೆ ಆಗಲ್ಲ. ಆ ಕಾರಣದಿಂದ ಮುದ್ರಿತ ಪುಸ್ತಕ ಓದಿನಿಂದ ಜ್ಞಾನಾರ್ಜನೆ ಹೆಚ್ಚಾಗುತ್ತದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ಹೆಚ್ಚು ಓದಲು ಸಾಧ್ಯವಾಗಲ್ಲ. ಆದರೆ, ಓದುವ ಹವ್ಯಾಸವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಪುಸ್ತಕಗಳು ನಿರಂತರವಾಗಿ ಬಿಡುಗಡೆಯಾಗುತ್ತಿದ್ದು, ಅವುಗಳ ಕುರಿತು ಸಂವಾದ, ಚರ್ಚೆಯೂ ಆಗಬೇಕು ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ಕೊಡುಗೆ ನೀಡುವುದರೊಂದಿಗೆ ಸಾಕಷ್ಟು ಸಾಂವಿಧಾನಿಕ ಸಲವತ್ತು, ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಆದರೆ, ಅವರ ಸಾಧನೆ ಮಹತ್ತರ ವಿಚಾರಗಳು ಜನರಿಗೆ ತಿಳಿದಿಲ್ಲ. ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಸಂಸ್ಥೆಯಿಂದ ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದ ಅವರ ಕೃತಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣವಾಯಿತು. ಜತೆಗೆ, ಜಲ ವಿದ್ಯುತ್ ಕೇಂದ್ರ ಸ್ಥಾಪನೆ, ವಿದ್ಯುತ್ ಉತ್ಪಾದನಾ ತಾಂತ್ರಿಕ ವಿದ್ಯುತ್ ಮಂಡಳಿ ಸ್ಥಾಪನೆ ಮಾಡಿದರು ಎಂದು ಸ್ಮರಿಸಿದರು.
ದೇಶದಲ್ಲಿ ಈ ಹಿಂದೆ ಕಾರ್ಮಿಕರು 14 ಗಂಟೆ ದುಡಿಯಬೇಕಾದ ಪರಿಸ್ಥಿತಿ ಇತ್ತು. ಇದನ್ನು ಗಮನಿಸಿದ ಅಂಬೇಡ್ಕರ್ ಅವರು ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆ ನಿಗದಿಗೊಳಿಸಿದರು. ಅಂಬೇಡ್ಕರ್ ಚಿಂತನೆ, ಹೋರಾಟದ ಫಲವಾಗಿ ಕಾರ್ಮಿಕರಿಗೆ ಅನೇಕ ಅನುಕೂಲಗಳಾಗಿವೆ ಎಂದು ಹೇಳಿದರು.
ಪುಸ್ತಕ ಕುರಿತು ಡಾ. ಸುಧಾಕರ್ ಹೊಸಳ್ಳಿ ಮಾತನಾಡಿದರು. ಕೃತಿಯ ಲೇಖಕ ಡಾ. ಜಿ.ಬಿ.ಹರೀಶ್ ಇದ್ದರು.