ಓದಿನಿಂದ ಜೀವನದಲ್ಲಿ ಸಾಕಷ್ಟು ಬದಲಾವಣೆ

27
Published on

ಮೈಸೂರು: ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನಾಗಬೇಕು ಎಂಬ ಗುರಿ ಇಟ್ಟುಕೊಂಡು ಓದಬೇಕು. ಓದಿನಿಂದ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ ಎಂಬುದನ್ನ ಮರೆಯಬಾರದು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಶ್ರೀನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಮತ್ತು ಶ್ರೀ ನಟರಾಜ ಮಹಿಳಾ ಪದವಿಪೂರ್ವ ಕಾಲೇಜು ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದರು.
ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಅವರು ನೇರ ನಡೆ-ನುಡಿಗೆ ಹೆಸರಾದವರು. ಸಮಾಜ ಸೇವೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ಒತ್ತು ನೀಡುತ್ತ ಬಂದಿದ್ದಾರೆ. ಶ್ರೀಗಳ ಕಾರ್ಯ ಅತ್ಯಂತ ಶ್ಲಾಘನೀಯವಾಗಿದ್ದು, ಈ ಸಂಸ್ಥೆಯಲ್ಲಿ ವಿದ್ಯೆ ಪಡೆದಂತಹ ಎಷ್ಟೋ ವಿದ್ಯಾರ್ಥಿಗಳು ಹಲವಾರು ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ. ಈ ವಿದ್ಯಾ ಸಂಸ್ಥೆಯಲ್ಲಿ ದೊರಕುತ್ತಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ದೇಶದ ಸತ್ಪ್ರಜೆಗಳಾಗಿ ಬೆಳೆಯಬೇಕು ಎಂದು ಹೇಳಿದರು.
ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಮಾತನಾಡಿ, ಪ್ರತಿಭೆ ಇದ್ದರೆ ಪುರಸ್ಕಾರ ತಾನೇ ಹುಡುಕಿಕೊಂಡು ಬರುತ್ತದೆ. ಶ್ರೀಗಳ ಸೇವಾ ಕಾರ್ಯ ಎಂದೆಂದಿಗೂ ಇರುವಂತದ್ದು, ಇಂತಹ ವೇದಿಕೆಗಳು ಪ್ರತಿಭೆಯನ್ನು ಅನಾವರಣಗೊಳಿಸಲು ಸಹಾಯಕವಾಗುತ್ತವೆ. ಶ್ರಮ ಇದ್ದ ಕಡೆ ಪುರಸ್ಕಾರ ಇದ್ದೇ ಇರುತ್ತದೆ. ಪ್ರತಿಭೆಗೆ ಯಾವುದೇ ಜಾತಿ, ಧರ್ಮ, ವರ್ಗ ಇರುವುದಿಲ್ಲ. ಎಲ್ಲರೂ ಮನುಜ ಮತದ ಮೂಲಕ ವಿಶ್ವ ಪಥವನ್ನು ಸಾಧಿಸಬೇಕು ಎಂದು ಹೇಳಿದರು.
ಶಾಸಕ ಜಿ.ಟಿ.ದೇವೇಗೌಡ ಅವರು ವಾತ್ಸಲ್ಯ ತ್ರೈಮಾಸಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಶ್ರೀ ನಟರಾಜ ಪ್ರತಿಷ್ಠಾನದ ಅಧ್ಯಕ್ಷ ಶ್ರೀಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪ್‌ಸಿಂಹ, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ವೀರಶೈವ ಮಹಾಸಭಾ ಅಧ್ಯಕ್ಷ ಬಸವರಾಜಪ್ಪ, ಕನ್ನಡ ಕಲಾ ಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಶಾರದಾ, ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿ.ಡಿ.ಸುನೀತಾರಾಣಿ, ಸಹಾಯಕ ಪ್ರಾಧ್ಯಾಪಕಿ ಎಂ.ಎಸ್.ಸಂಧ್ಯಾರಾಣಿ, ಉಪನ್ಯಾಸಕರಾದ ಬಿ.ರಾಧಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net