

ಮೈಸೂರು: ಪ್ರತಿಯೊಬ್ಬರು ತಮ್ಮ ಜ್ಞಾನ ವೃದ್ಧಿಸಿಕೊಳ್ಳಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕವಯತ್ರಿ ಡಾ.ಲತಾ ರಾಜಶೇಖರ್ ಸಲಹೆ ನೀಡಿದರು.
ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಸಮಾರಂಭದಲ್ಲಿ ಎ. ಹೇಮಗಂಗಾ ರಚನೆಯ ‘ಕನಸಿಲ್ಲದ ಹಾಸಿಯಲ್ಲಿ’ ಕವನ ಸಂಕಲ ಬಿಡುಗಡೆ ಮಾಡಿ ಮಾತನಾಡಿದರು.
ದೇಶ ಸುತ್ತು ಕೋಶ ಓದು ಎಂಬ ಗಾದೆ ಮಾತಿನಂತೆ ಪುಸ್ತಕ ಓದಿದರೆ ವಿಶ್ವದ ಪರಿಚಯ ಮಾಡಿಕೊಳ್ಳಬಹುದು. ಪುಸ್ತಕ ಓದಿದರೆ ವಿಶ್ವ ಪರ್ಯಟನೆ ಮಾಡಿದಂತೆ ಆಗುತ್ತದೆ. ಪ್ರತಿಯೊಬ್ಬರ ಬದುಕಿನಲ್ಲಿ ಬದಲಾವಣೆ ತರುವಲ್ಲಿ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿಯ ರಾಮಾಯಣ ಕೃತಿ ಓದಿದರೆ ಅಯೋಧ್ಯೆ ಸೇರಿದಂತೆ ದೇಶದ ಪುಣ್ಯ ಕ್ಷೇತ್ರಗಳ ದರ್ಶನ ಆಗುತ್ತದೆ. ವ್ಯಾಸ ಮಹರ್ಷಿಯ ಮಹಾಭಾರತ ಕೃತಿ ಓದಿದರೆ ದೇಶದ ಮಹಾನಗರಿಗಳ ಪರಿಚಯ ಆಗುತ್ತದೆ. ವಿಲಿಯಂ ಶೇಕ್ಸ್‌ಸ್ಪಿಯರ್ ಕೃತಿ ಓದಿದರೆ ಇಂಗ್ಲೆಂಡ್‌ನ ಸೌಂದರ್ಯ ಆಸ್ವಾದಿಸಬಹುದು ಎಂದರು.
ಈ ಸಂದರ್ಭ ಡಾ.ಲತಾ ರಾಜಶೇಖರ್ ಅವರಿಗೆ ‘ಮಹಾಕಾವ್ಯ ಸರಸ್ವತಿ ಪ್ರಶಸ್ತಿ’, ವಿದುಷಿಯರಾದ ಎಸ್.ವಿ. ಪನ್ನಗ ಮತ್ತು ವಿ. ಸುನಂದ ದಿಲೀಪ್ ಅವರಿಗೆ ‘ಗಾಯನ ಗಂಗಾ ಪ್ರಶಸ್ತಿ’, ಬಿ.ಕೆ.ಮೀನಾಕ್ಷಿ, ಸುಜಾತಾ ರವೀಶ್, ಯಶೋಧ ರಾಮಕೃಷ್ಣ, ಜೆ.ಪ್ರಭಾಶಾಸ್ತ್ರಿ, ಪಿ.ಎಸ್.ವೈಲೇಶ ಕೊಡಗು ಅವರಿಗೆ ‘ಸಾಹಿತ್ಯ ಗಂಗಾ ಪ್ರಶಸ್ತಿ’, ಎನ್.ಸಿ.ಮಮತಾಗೆ ‘ಸಂಘಟನಾ ಚತುರೆ ಪ್ರಶಸ್ತಿ, ಡಾ.ಕೆ.ಪ್ರೇಮಕುಮಾರ್‌ಗೆ ‘ವಿದ್ಯಾನಿಧಿ ಪ್ರಶಸ್ತಿ’, ಕೇಶವ್ ಕೌಶಕ್‌ಗೆ ‘ಸಾಧನ ಗಂಗಾ ಪ್ರಶಸ್ತಿ’, ಸೌರವ್‌ಗಜ್‌ಗೆ ‘ಪ್ರತಿಭಾ ಗಂಗಾ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಎಂ.ಬಿ.ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷೆ ಎ.ಹೇಮಗಂಗಾ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಸಿ.ವಾಣಿ ರಾಘವೇಂದ್ರ, ಕವಯಿತ್ರಿ ಬಿ.ಶೋಭಾ, ಕವಯತ್ರಿ ಕೆರೋಡಿ ಎಂ.ಲೋಲಾಕ್ಷಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಉಪಾಧ್ಯಕ್ಷೆ ಡಾ.ಸೌಗಂಧಿಕಾ ವಿ.ಜೋಯಿಸ್, ಪ್ರಧಾನ ಕಾರ್ಯದರ್ಶಿ ಬಿ.ಶೋಭಾ, ಖಜಾಂಚಿ ರೇಖಾ ಸಂತೋಷ್, ಸಹಕಾರ್ಯದರ್ಶಿ ಎಸ್.ಆರ್.ರೂಪಶ್ರೀ, ಸಂಘಟನಾ ಕಾರ್ಯದರ್ಶಿಗಳಾ ನೀತು ಎಸ್.ರಾಜ್, ಡಾ.ಕೆ.ಪ್ರೇಮ್‌ಕುಮಾರ್ ಇದ್ದರು.