ಓದು ಬರಹ ಒಂದೇ ನಾಣ್ಯದ ಎರಡು ಮುಖಗಳು

8 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಹಿತಿ ಅಧ್ಯಯನಶೀಲತೆ ರೂಢಿಸಿಕೊಂಡಿರಬೇಕು. ಹಲವಾರು ಅತ್ಯುತ್ತಮ ಪುಸ್ತಕಗಳನ್ನು ಓದಿ ಅರ್ಥೈಸಿಕೊಳ್ಳುವುದರಿಂದ ಅವರ ಬರವಣಿಗೆಯಲ್ಲಿ ಓದು ಸಹಕಾರಿಯಾಗಲಿದೆ. ಓದು ಬರಹ ಒಂದೇ ನಾಣ್ಯದ ಎರಡು ಮುಖಗಳು ಎಂದು ನಿವೃತ್ತ ಉಪನ್ಯಾಸಕ ವಸಂತಮಾಧವ ಮುದಕವಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಶನಿವಾರ ಏರ್ಪಡಿಸಿದ್ದ ಭಾಗ್ಯಶ್ರೀ ಜೋಶಿ ರಚಿತ "ಕೇಳೋ ಜಾಣ ! ಕಥೆಯೊಂದ" ಕೃತಿ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೀವನದ ಸತ್ಯ, ನೀತಿ, ಆದರ್ಶಗಳನ್ನು ಒಳಗೊಂಡ ಅಮೂಲ್ಯ ಕಥೆಗಳ ಉತ್ತಮ ಅನುವಾದಿತ ಕೃತಿ ಇದಾಗಿದೆ. ಲೇಖಕಿ ಮುಂದಿನ ದಿನಗಳಲ್ಲಿ ಕಥೆ, ಕಾದಂಬರಿ ವಿವಿಧ ಪ್ರಕಾರದ ಸಾಹಿತ್ಯ ಕೃಷಿಯಲ್ಲಿ ತೊಡಗಲಿ ಎಂದರು.
ಜಗದೀಶ ಕರಿಯಮ್ಮನವರ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಭಾಗ್ಯಶ್ರೀ ಜೋಶಿ ಉತ್ತಮ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುವುದರ ಜತೆಗೆ ಸಾಹಿತ್ಯ ಆಸಕ್ತಿ ಬೆಳೆಸಿಕೊಂಡು ಕೃತಿ ರಚನೆಯಲ್ಲಿ ತೊಡಗಿದ್ದು ವಿಶೇಷ. ಅವರಿಂದ ಇನ್ನು ಹಲವಾರು ಕೃತಿಗಳು ರಚನೆಗೊಂಡು ಸಾಹಿತ್ಯ ಕ್ಷೇತ್ರ ಮತ್ತಷ್ಟು ಸಿರಿವಂತವಾಗಲಿ ಎಂದರು.
ಕೃತಿ ಕುರಿತು ಮಾಲತಿ ಮುದಕವಿ ಮಾತನಾಡಿ, ಕಥೆಗಳು ನಮ್ಮ ಜೀವನಕ್ಕೆ ಆದರ್ಶ ತತ್ವಗಳನ್ನು ತಿಳಿಸುತ್ತವೆ. ಕೃತಿಯಲ್ಲಿನ ಕಥೆಗಳ ನಿರೂಪಣೆ ಆಕರ್ಷಕವಾಗಿ ಮೂಡಿಬಂದಿದ್ದು, ಪ್ರತಿ ಕಥೆಯ ನೀತಿ ಉತ್ತಮವಾಗಿ ಮೂಡಿಬಂದಿದೆ. ಮಕ್ಕಳು ಹಿರಿಯರು ಇಷ್ಟಪಡುವ ಕಥೆಗಳನ್ನು ಒಳಗೊಂಡ ಕೃತಿ ಇದಾಗಿದೆ ಎಂದರು.
ಶಿಕ್ಷಕ ಲೇಖಕ ರಂಗನಾಥ ವಾಲ್ಮೀಕಿ ಮಾತನಾಡಿ, ಸಾಹಿತಿಯಾದವರು ಅಧ್ಯಯನಶೀಲರಾಗಬೇಕು. ಉತ್ತಮ ಓದುಗ ಉತ್ತಮ ಬರಹಗಾರ ಆಗದೆ ಇರಬಹುದು, ಉತ್ತಮ ಬರಹಗಾರ ಉತ್ತಮ ಓದುಗ ಆಗಿರಲೇಬೇಕು. ಹೀಗಾಗಿ ಹೆಚ್ಚು ಅಧ್ಯಯನ ಮಾಡಿ ವಿಷಯ ತಿಳಿದು ಬರವಣಿಗೆಯಲ್ಲಿ ತೊಡಗಬೇಕು ಎಂದರು.
ಸಿತಾರ ವಾದಕ ಮೋಹಸಿನ್​ ಖಾನ್​, ಡಾ. ಅನಿರುದ್ಧ ಕುಲಕಣಿರ್, ಬದರಿನಾಥ ಕುಲಕಣಿರ್, ಪ್ರಲ್ಹಾದ ಜೋಶಿ, ಉಷಾ ಜೋಶಿ, ಇತರರು ಇದ್ದರು.
ಭಾಗ್ಯಶ್ರೀ ಜೋಶಿ ಸ್ವಾಗತಿಸಿದರು. ಶ್ರೀಪ್ರಿಯಾ ಅಗ್ನಿಹೋತ್ರಿ ನಿರೂಪಿಸಿದರು. ಶ್ರೀಕಾಂತ ಅಗ್ನಹೋತ್ರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net