ಓದುಗರಿಗೆ ಪುಸ್ತಕಗಳ ಕೊರತೆ ಆಗದಿರಲಿ- ಎಡಿಸಿ ಅನುರಾಧಾ ಸೂಚನೆ

Kotturu Library
ಕೊಟ್ಟೂರಿನ ಸಾರ್ವಜನಿಕ ಗ್ರಂಥಾಲಯಕ್ಕೆ ಶುಕ್ರವಾರ ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಭೇಟಿ ನೀಡಿದ್ದರು.
Published on

ಕೊಟ್ಟೂರು: ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿರುವ ಯವಜನತೆ ಹಾಗೂ ನಿತ್ಯ ಓದುಗರರಿಗೆ ಪುಸ್ತಕಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಗ್ರಂಥಾಲಯ ಅಧಿಕಾರಿ ಮಲ್ಲಪ್ಪ ಗುಡ್ಲಾನೂರು ಅವರಿಗೆ ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಸೂಚಿಸಿದರು.

ಪಟ್ಟಣದ ಸಾರ್ವಜನಿಕ ಗ್ರಂಥಾಲಯಕ್ಕೆ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಮಳೆ ಬಂದರೆ ಕಟ್ಟಡ ಸೋರುತ್ತದೆ. ಬಿಲ್ಡಿಂಗ್ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಡಿಎಂಎಫ್‌ನಿಂದ 25 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ, ಇನ್ನೂ ಕಾಮಗಾರಿ ಆರಂಭವಾಗಿಲ್ಲ ಎಂದು ಎಡಿಸಿ ಅವರಿಗೆ ಮಲ್ಲಪ್ಪ ಗುಡ್ಲಾನೂರು ತಿಳಿಸಿದರು.

ಯಾವ ಇಲಾಖೆ ಗುತ್ತಿಗೆ ಪಡೆದಿದೆ ಎಂದು ಮಾಹಿತಿ ಪಡೆದ ಅನುರಾಧಾ, ಇಂಜಿನಿಯರ್ ಅವರೊಂದಿಗೆ ಮಾತನಾಡಿ, ತಕ್ಷಣ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲು ಸೂಚನೆ ನೀಡುವುದಾಗಿ ತಿಳಿಸಿದರು.

ಗ್ರಂಥಾಲಯದ ಸದಸ್ಯತ್ವ ದಾಖಲೆ ಪರಿಶೀಲಿಸಿದ ಎಡಿಸಿ, 2335 ಜನ ಸದಸ್ಯತ್ವ ಪಡೆದಿರುವುದನ್ನು ನೋಡಿ ಖುಷಿಪಟ್ಟರು. ಇಡೀ ಜಿಲ್ಲೆಯಲ್ಲಿ ಅತಿ ಹೆಚ್ಚು ಸದಸ್ಯತ್ವ ಪಡೆದ ಗ್ರಂಥಾಲಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇಲ್ಲಿ ನಿತ್ಯ ಓದುಗರರು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರ ಸಂಖ್ಯೆ ಹೆಚ್ಚಾಗಿದ್ದು, ಗ್ರಂಥಾಲಯಕ್ಕೆ ಭೇಕಾದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರೆ ಜಿಲ್ಲಾಧಿಕಾರಿ ಸಭೆಯಲ್ಲಿ ಚರ್ಚಿಸಿ, ರಾಜ್ಯ ಗ್ರಂಥಾಲಯ ಇಲಾಖೆ ನಿರ್ದೇಶಕರ ಗಮನಕ್ಕೆ ತಂದು ಅಗತ್ಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿದ್ದವರನ್ನು ಮಾತನಾಡಿಸಿದ ಎಡಿಸಿ, ಗ್ರಂಥಾಲಯ ಸದ್ಬಳಕೆ ಮಾಡಿಕೊಂಡು ಕೆಎಎಸ್, ಐಎಎಸ್ ಸೇರಿ ಇತರ ಪರೀಕ್ಷೆಗಳನ್ನು ಪಾಸು ಉನ್ನತ ಹುದ್ದೆ ಪಡೆಯುವಂತೆ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net