

ಬೆಳಗಾವಿ: ವಿದ್ಯಾರ್ಥಿ ಜೀವನ ಬಹಳ ಮಹತ್ವದ ಘಟ್ಟ. ಈ ಹಂತದಲ್ಲಿ ವಿದ್ಯಾರ್ಥಿಗಳು ಆಸಕ್ತಿದಾಯಕ ವಿಷಯ ಆಯ್ದುಕೊಂಡು, ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಸಲಹೆ ನೀಡಿದರು.
ನಗರದ ಕೆಎಲ್‌ಇ ಸಂಸ್ಥೆಯ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯವು ಸೋಮವಾರ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪುನಶ್ಚೇತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಮಯಕ್ಕೆ ಬಹಳ ಮಹತ್ವವಿದೆ. ವಿದ್ಯಾರ್ಥಿಗಳು ತಮ್ಮ ಸಮಯ ಹಾಳು ಮಾಡಿಕೊಳ್ಳದೇ ಗುರಿ ಇಟ್ಟುಕೊಂಡು ಪರಿಶ್ರಮದಿಂದ ಯಶಸ್ಸು ಗಳಿಸಬೇಕು ಎಂದರು.
ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ವಿದ್ಯಾರ್ಥಿಗಳ ಕಲಿಕಾ ಜೀವನವು ಭವಿಷ್ಯದ ಭದ್ರ ಬುನಾದಿಯಾಗಿದೆ. ದೊಡ್ಡ ಕನಸುಗಳು ಒಳ್ಳೆಯ ಭವಿಷ್ಯಕ್ಕೆ ಜನ್ಮ ನೀಡುತ್ತವೆ. ತಂದೆ-ತಾಯಿ, ಶಿಕ್ಷಕರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ವಿಧಾನಪರಿಷ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ. ಎದುರಾಗುವ ಸಮಸ್ಯೆಗಳನ್ನು ಮೆಟ್ಟಿ ನಿಂತು ಮುನ್ನಡೆಯಬೇಕು ಎಂದು ಕರೆ ನೀಡಿದರು.
ಕಾಲೇಜ್ ಪ್ರಾಚಾರ್ಯ ವೇಣುಗೋಪಾಲ ರೆಡ್ಡಿ ಸ್ವಾಗತಿಸಿದರು. ಕೆಎಲ್‌ಇ ಸ್ವತಂತ್ರ ಪಪೂ ಕಾಲೇಜುಗಳ ಸಂಯೋಜಕ ಡಾ.ಮಲ್ಲಿಕಾರ್ಜುನ 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವರದಿ ಮಂಡಿಸಿದರು. ಮಾಧುರಿ ವಸೂಲಕರ ಪರಿಚಯಿಸಿದರು. ಮಾಯಪ್ಪ ಪಾಟೀಲ, ಐಶ್ವರ್ಯ ಕಾಂಬಳೆ ನಿರೂಪಿಸಿದರು. ತುರು ಪಾಟೀಲ ವಂದಿಸಿದರು.