ಎಲ್ಲರಿಗೂ ಅವಕಾಶ ಕೊಟ್ಟಿರುವ ಸಂವಿಧಾನ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Read the Preamble of the Constitution
Published on

ಮಂಡ್ಯ: ಸಂವಿಧಾನ ಎಲ್ಲರಿಗೂ ಒಂದೇ ರೀತಿಯ ಅವಕಾಶ ಕೊಟ್ಟಿದೆ. ಯಾರು ಬೇಕಾದರೂ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಇನ್ನಿತರ ಗೌರವದ ಹುದ್ದೆಗಳನ್ನು ಪಡೆಯಬಹುದು. ಅಂತೆಯೇ ಸಂವಿಧಾನ ವಿರೋಧಿ ಚಟುವಟಿಕೆ ನಡೆಸುವವರು ದೇಶ ಹಾಗೂ ರಾಜ್ಯಕ್ಕೆ ಮಾರಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಗರದ ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕವಾಗಿ ಸಂವಿಧಾನ ಪೀಠಿಕೆಯನ್ನು ಓದು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಕೊಟ್ಟ ಮತದಾನ ಅವಕಾಶದಿಂದಲೇ ನಾವಿಂದು ಚುನಾಯಿತ ಪ್ರತಿನಿಧಿಗಳಾಗಿ ಜನಸೇವೆ ಮಾಡುತ್ತಿದ್ದೇವೆ ಎಂದರು.

ಭಾರತ ಸಂವಿಧಾನವು ಪ್ರಪಂಚದ ದೊಡ್ಡ ಸಂವಿಧಾನವಾಗಿದೆ. ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಮಾನವಾದ ಅವಕಾಶ ಸಂವಿಧಾನದಲ್ಲಿ ಇದೆ. ಈ ಮೂಲಕ ಪ್ರಜಾಪ್ರಭುತ್ವದ ಕಲ್ಪನೆಯನ್ನು ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನನ್ನ ನಮನಗಳು. ಒಂದು ವೇಳೆ ಸಂವಿಧಾನದ ಪರಿಕಲ್ಪನೆ ಇಲ್ಲದ್ದಿದ್ದರೆ ನಮ್ಮ ಸಮಾಜದ ಸ್ಥಿತಿ ಈ ರೀತಿ ಇರುತ್ತಿರಲಿಲ್ಲ. ಬಡವರು ಹಾಗೂ ಶ್ರಮಿಕರು ಬಂಡವಾಳ ಶಾಹಿಗಳ ಎದುರು ಕೈಕಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇಂದು ನಾವೆಲ್ಲಾ ನಮಗೆ ಹಕ್ಕಿದೆ ನಮಗೂ ಅವಕಾಶ ಕೊಡಿ ಎಂದು ಕೇಳುವುದಕ್ಕೂ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಕಾರಣ. ಹಾಗಾಗಿ ಸಂವಿಧಾನದ ಮೇಲೆ ಎಲ್ಲರಿಗೂ ಗೌರವವಿರಲಿ ಎಂದು ಹೇಳಿದರು.

ಶಾಲಾ ಹಾಗೂ ಕಾಲೇಜುಗಳಿಂದ ಇಂದಿನಿಂದ ಸಂವಿಧಾನ ಪೀಠಿಕೆ ಓದುವುದು ಕಡ್ಡಾಯವಾಗಿದೆ. ಬೆಳಗ್ಗಿನ ಪ್ರಾರ್ಥನೆಯ ನಂತರ ಸಂವಿಧಾನದ ಪೀಠಿಕೆ ಓದಬೇಕು. ಅಂತೆಯೇ ಸಂವಿಧಾನದ ವಿರುದ್ಧವಾಗಿ ಮಾತನಾಡುವುದು ಹಾಗೂ ಅದರ ವಿರುದ್ಧ ನಡೆದುಕೊಳ್ಳುವುದನ್ನು ಸರ್ಕಾರ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಶಾಸಕ ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್, ಮಂಡ್ಯ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪುಟ್ಟರಾಜು, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್ ಇತರರಿದ್ದರು.

ಏಳು ಲಕ್ಷ ನೋಂದಣಿ: ಮಂಡ್ಯ ವಿವಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಐದು ಸಾವಿರ ವಿದ್ಯಾರ್ಥಿಗಳೊಂದಿಗೆ ಸಾಮೂಹಿಕವಾಗಿ ಸಂವಿಧಾನ ಪೀಠಿಕೆ ಓದಲಾಯಿತು. ಭಾಗವಹಿಸಿದ ಎಲ್ಲ ಮಕ್ಕಳಿಗೂ ಸಂವಿಧಾನ ಪೀಠಿಕೆಯ ಒಂದು ಪ್ರತಿ ನೀಡಲಾಯಿತು. ಅಂತೆಯೇ ಪೀಠಿಕೆ ಓದಲು ಜಿಲ್ಲೆಯಲ್ಲಿ 7 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net