

ನರೇಗಲ್ಲ: ವಿದ್ಯಾರ್ಥಿಗಳು ತಮ್ಮ ಜೀವನಕ್ಕೆ ಅವಶ್ಯಕವಿರುವ ಜ್ಞಾನಕ್ಕಾಗಿ ಓದಬೇಕೆ ಹೊರತು ನೌಕರಿಗಾಗಿ ಎಂದಿಗೂ ಓದಬೇಡಿ ಎಂದು ರಾಜ್ಯ ಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು.
ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದಲ್ಲಿ ಶನಿವಾರ ಆಯೋಜಿಸಿದ್ದ ಹಿರಿಯ ಅನ್ನದಾನ ಸ್ವಾಮೀಜಿಗಳ 111ನೇ ಪುಣ್ಯಸ್ಮರಣೆ, ಲಿಂ. ಡಾ. ಅಭಿನವ ಅನ್ನದಾನ ಸ್ವಾಮೀಜಿಗಳ ದ್ವಿತೀಯ ಪುಣ್ಯಸ್ಮರಣೆಯ ನಿಮಿತ್ತ ಆಯೋಜಿಸಿದ್ದ ಅಕ್ಷರ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಮೊದಲು ನಿನ್ನನ್ನು ನೀನು ತಿಳಿದುಕೊ. ನೌಕರಿಗಾಗಿ ಎಂದಿಗೂ ಜೋತು ಬೀಳಬೇಡ. ಕೊಡುವವನಾಗು ಹೊರತಾಗಿ ಬೇಡುವವನಾಗಬೇಡ’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಹೇಳುವಂತೆ ಕನಸುಗಳು ದೊಡ್ಡದಾಗಿದ್ದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಮನುಷ್ಯರಾಗಿ ನಿಮ್ಮಲ್ಲಿ ನೀವು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳದಿದ್ದರೆ ಜೀವನಕ್ಕೆ ಯಾವುದೇ ಬೆಲೆ ಇಲ್ಲ. ನಿಮ್ಮಲ್ಲಿನ ಉತ್ತಮ ಗುಣಗಳನ್ನು ಜೀವನದುದ್ದಕ್ಕೂ ಮುನ್ನಡೆಸಿಕೊಂಡು ಬನ್ನಿರಿ ಎಂದು ಹೇಳಿದರು.
ಗದಗನಲ್ಲಿ ಪ್ರಾರಂಭವಾಗಲಿರುವ ಶ್ರೀ ಅನ್ನದಾನೇಶ್ವರ ವಿಜ್ಞಾನ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿದ ಬಾಗಲಕೋಟೆ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಅಕ್ಷರ ಎಂಬುದೇ ಒಂದು ಅದ್ಭುತ ಕಲ್ಪನೆ. ಅದರ ಹೆಸರಿನಲ್ಲಿ ನಡೆದಿರುವ ಈ ಜಾತ್ರೆ ಬಹಳಷ್ಟು ಅರ್ಥಪೂರ್ಣ ಎಂದರು.
ಶ್ರೀ ಅನ್ನದಾನೇಶ್ವರ ನಗರವನ್ನು ಉದ್ಘಾಟಿಸಿದ ಶಾಸಕ ಜಿ. ಎಸ್. ಪಾಟೀಲ ಮಾತನಾಡಿ, ಈ ಹಿಂದೆ ಮಠ ಮಾನ್ಯಗಳು ಶಿಕ್ಷಣ ನೀಡಿ ಗ್ರಾಮೀಣ ಭಾಗದ ಜನರ ಬದುಕನ್ನು ಬೆಳಗಿವೆ. ಅದಕ್ಕಾಗಿ ನಾವೆಲ್ಲರೂ ಮಠಾಧೀಶರಿಗೆ ಎಂದಿಗೂ ಆಭಾರಿಯಾಗಿರಬೇಕು ಎಂದರು. ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಒಳ ಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮೀಜಿ, ನಂದವಾಡಗಿ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯರು, ಕರೇಗುಡ್ಡದ ಮಹಾಂತಲಿಂಗ ಶಿವಾಚಾರ್ಯರು, ಅಡವಿ ಅಮರೇಶ್ವರ ಮಠದ ತೋಂಟದಾರ್ಯ ಸ್ವಾಮೀಜಿ, ಹೊಸಪೇಟೆ ಕೆಂಪಿನ ಮಠದ ಚಂದ್ರಶೇಖರ ದೇವರು, ಹಳಿಂಗಳಿ ಕಮರಿಮಠದ ಶಿವಾನಂದ ದೇವರು, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಶಾಸಕ ಬಸವರಾಜ ರಾಯರಡ್ಡಿ, ಮಾಜಿ ಶಾಸಕ ಅಮರೇಗೌಡ ಬಯ್ಯಪುರ, ದೇವೇಂದ್ರಪ್ಪ ಬಳೂಟಗಿ, ರವೀಂದ್ರನಾಥ ದೊಡ್ಡಮೇಟಿ ಇತರರಿದ್ದರು.
ನಿಶ್ಚಿತ ಗುರಿಯಿಂದ ಸಾಧಕರಾಗಲು ಸಾಧ್ಯನಿಶ್ಚಿತ ಗುರಿ ಇಟ್ಟುಕೊಂಡು ಸಮರ್ಪಣಾ ಭಾವದಿಂದ ನಿರಂತರವಾಗಿ ತೊಡಗಿಸಿಕೊಂಡಲ್ಲಿ ಸಾಧಕರಾಗಲು ಸಾಧ್ಯವಿದೆ ಎಂದು ಗದಗ- ವಿಜಯಪುರ ರಾಮಕೃಷ್ಣ ಆಶ್ರಯದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ‘ಸ್ವಾಮಿ ವಿವೇಕಾನಂದರು ನಮ್ಮ ಮೌಲ್ಯ, ಪರಂಪರೆಯ ಮಹತ್ವವನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಅದನ್ನು ನಾವು ಅರ್ಥ ಮಾಡಿಕೊಂಡು ಮೌಲ್ಯಯುತ ಸುಂದರ ಸಮಾಜ ನಿರ್ಮಾಣಕ್ಕೆ ಕಂಕಣಬದ್ಧರಾಬೇಕು. ವಿಜ್ಞಾನ ಮತ್ತು ತಾಂತ್ರಿಕತೆ ವಿಸ್ತಾರಗೊಂಡಿದೆ. ಅದ್ಭುತ ಸಾಧನೆಗಳಾಗಿವೆ. ವಿಜ್ಞಾನ ವಿದ್ಯಾರ್ಥಿಗಳು ಶ್ರದ್ಧೆ ಮತ್ತು ನಿಷ್ಠೆಯಿಂದ ವಿದ್ಯಾಭ್ಯಾಸ ಮಾಡುವ ಮೂಲಕ ದೊಡ್ಡ ವಿಜ್ಞಾನಿಯಾಗಬೇಕು ಎಂದರು.