

ಮೈಸೂರು: ವಿದ್ಯಾರ್ಥಿಗಳು ದೇಶ, ಸಮಾಜವನ್ನು ಕಟ್ಟಬೇಕಾದರೆ ಇತಿಹಾಸವನ್ನು ತಿಳಿದು ಹೆಚ್ಚು ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರು ನಡೆದುಕೊಂಡು ಬಂದ ದಾರಿಯಲ್ಲಿ ನಾವು ಸಾಗುತ್ತೇವೆಂದು ಪ್ರತಿಜ್ಞೆ ಮಾಡಬೇಕು ಎಂದು ಪ್ರಗತಿಪರ ಚಿಂತಕ ಡಾ.ಆರ್.ಮೋಹನ್‌ರಾಜ್ ಸಲಹೆ ನೀಡಿದರು.
ವಿಜಯನಗರ 3ನೇ ಹಂತದಲ್ಲಿರುವ ಸಿದ್ದಲಿಂಗೇಶ್ವರನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಜ್ಞಾನೋತ್ಸವ-2025 ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಬುದ್ಧ, ಬಸವ, ಅಂಬೇಡ್ಕರ್ ಹೆಸರನ್ನು ಎಲ್ಲರೂ ಹೇಳುತ್ತಾರೆ. ಆದರೆ ಅವರ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಅಂಬೇಡ್ಕರ್ ವಿದೇಶದಲ್ಲಿ ಅತ್ಯುನ್ನತ ವ್ಯಾಸಂಗ ಮಾಡಿ ಬಂದರೂ ಸಹ ಈ ಸಮಾಜ ಅವರನ್ನು ಗೌರವದಿಂದ ಕಾಣಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿರುವುದರಿಂದ ಯಾರಿಗೂ ಕೆಲಸ ಸಿಗುವುದಿಲ್ಲ. 5 ವರ್ಷ ಕಷ್ಟಪಟ್ಟು ಓದಿಕೊಂಡು ಸ್ವಾಭಿಮಾನಿಗಳಾಗಿ ಅಂಬೇಡ್ಕರ್ ಪುಸ್ತಕಗಳನ್ನು ಓದುವುದರೊಂದಿಗೆ ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾದ ಚಂದ್ರಮ್ಮ ಮಾತನಾಡಿ, ಜ್ಞಾನಕ್ಕೆ ಮಾದರಿ ಅಂಬೇಡ್ಕರ್. ನಾವೆಲ್ಲ ಅಂಬೇಡ್ಕರ್ ಅನುಯಾಯಿಗಳು. ವಿದ್ಯಾರ್ಥಿಗಳು ನಿಮ್ಮ ಬಡತನವನ್ನು ಹೋಗಲಾಡಿಸಬೇಕಾದರೆ ಸರ್ಕಾರದ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ನಿಮ್ಮ ತಂದೆ ತಾಯಿಯನ್ನು ನೆನೆಸಿಕೊಂಡು ದುಶ್ಚಟಗಳಿಗೆ ದಾಸರಾಗದೆ ಗುರಿ ಇಟ್ಟುಕೊಂಡು ಚೆನ್ನಾಗಿ ಓದಿ ಗುರಿ ತಲುಪಬೇಕು ಎಂದರು.
ನಿಲಯಪಾಲಕ ಕೆಎಎಸ್ ಪ್ರದೀಪ್ ಮಾತನಾಡಿ, ಈ ಸಮಾರಂಭಕ್ಕೆ ಜ್ಞಾನೋತ್ಸವ ಎಂದು ಹೆಸರಿಟ್ಟಿರುವುದು ವಿದ್ಯಾರ್ಥಿಗಳು ಅಂಬೇಡ್ಕರ್‌ರಂತೆ ಜ್ಞಾನಿಗಳಾಗಬೇಕು. ನಮ್ಮ ಈ ಸುಖಕರ ಜೀವನಕ್ಕೆ ಅಂಬೇಡ್ಕರ್ ಕಾರಣ. ನಿಮ್ಮ ತಂದೆ, ತಾಯಿಗೆ ನ್ಯಾಯ ಒದಗಿಸಬೇಕಾದರೆ ಮೊಬೈಲ್‌ನಿಂದ ದೂರವಿದ್ದು ಚೆನ್ನಾಗಿ ಓದಿ ಗುರಿ ಮುಟ್ಟಬೇಕು. ವಿದ್ಯೆ ಜತೆಗೆ ಸಂವಿಧಾನವನ್ನು ಓದಿಕೊಂಡು ಜೀವನ ರೂಪಿಸಿಕೊಳ್ಳಿರಿ ಎಂದರು.
ನಿಲಯಪಾಲಕರಾದ ಕೆ. ಮಹೇಶ್, ಚಿಕ್ಕೀರಯ್ಯ, ಮಹೇಶ್, ವಸಂತಕುಮಾರಿ, ಕುಮಾರಿ, ಪ್ರಸಾದ್, ಪವಿತ್ರಾ, ಕಾರ್ತಿಕ್, ಕಮಲಾಕ್ಷಿ, ಮಹೇಶ್, ಜಾನಪದ ಕಲಾವಿದ ಅಮ್ಮರಾಮಚಂದ್ರ, ಓಂ ರಮೇಶ್ ಇದ್ದರು.