ಗ್ರೀನ್ ಕ್ಯಾಂಪಸ್​ಗೆ ಮರು ಟೆಂಡರ್

Smart_Cities
Published on

ಸಂತೋಷ ವೈದ್ಯ ಹುಬ್ಬಳ್ಳಿ

ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ ಗ್ರೀನ್ ಕ್ಯಾಂಪಸ್ ನಿರ್ವಣಕ್ಕೆ ಮತ್ತೊಮ್ಮೆ ಟೆಂಡರ್ ಕರೆಯಲಾಗಿದೆ. 5 ಕೋಟಿ ರೂ. ವೆಚ್ಚದ ಈ ಕಾಮಗಾರಿಗೆ ಇದೀಗ 3ನೇ ಬಾರಿ ಟೆಂಡರ್ ಕರೆಯುತ್ತಿರುವುದು. ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಮರು ಟೆಂಡರ್​ಗೆ ಹೋಗುತ್ತಿರುವುದು ಇದೇ ಮೊದಲಲ್ಲ. ಇಲ್ಲಿ ಹೀಗೆ ಆಗುವುದು ಸಾಮಾನ್ಯ ಪ್ರಕ್ರಿಯೆ ಎಂಬಂತಾಗಿದೆ.

ಗ್ರೀನ್ ಕ್ಯಾಂಪಸ್​ಗೆ ಮೊದಲ ಬಾರಿ ಟೆಂಡರ್ ಕರೆದಾಗ ಯಾರೂ ಭಾಗವಹಿಸಿರಲಿಲ್ಲ. 2ನೇ ಬಾರಿ ಟೆಂಡರ್ ಕರೆದಾಗ ಮೂವರು ಭಾಗವಹಿಸಿದ್ದರೂ ಯಾರಿಗೂ ಅರ್ಹತೆ ಇರಲಿಲ್ಲ. ಹಾಗಾಗಿ ಇದೀಗ 3ನೇ ಬಾರಿ ಟೆಂಡರ್ ಕರೆಯಲಾಗಿದೆ.

ರೂಫ್ ಟಾಪ್ ಸೋಲಾರ್, ಎಲ್​ಇಡಿ ಬೀದಿ ದೀಪ, ಬೈಕ್ ಶೇರಿಂಗ್, ಇತ್ಯಾದಿ ಕಾಮಗಾರಿಗಳು ಹಲವು ಬಾರಿ ಟೆಂಡರ್ ಪ್ರಕ್ರಿಯೆಗೆ ಒಳಪಟ್ಟಿವೆ. ಈಗಲೂ ಕೆಲವು ಕಾಮಗಾರಿಗಳು ಕಾರ್ಯಾನುಷ್ಠಾನಕ್ಕೆ ಬಂದಿಲ್ಲ. ಇದರಿಂದ ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯು ಸಾಧ್ಯತಾ ವರದಿ, ಡಿಪಿಆರ್, ಟೆಂಡರ್ ಪ್ರಕ್ರಿಯೆಯಲ್ಲಿಯೇ ಕಾಲಹರಣವಾಗುತ್ತಿದೆಯೆಂಬ ಆಕ್ಷೇಪವನ್ನು ಹೊತ್ತುಕೊಂಡಿದೆ. ಒಂದಕ್ಕೊಂದು ಹೊಂದಿಕೊಂಡಿರುವ ಹು-ಧಾ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ, ಚಿಟಗುಪ್ಪಿ ಆಸ್ಪತ್ರೆ ಹಾಗೂ ಲ್ಯಾಮಿಂಗ್ಟನ್ ಶಾಲೆ ಗ್ರೀನ್ ಕ್ಯಾಂಪಸ್ ಯೋಜನೆ ವ್ಯಾಪ್ತಿಗೆ ಬರಲಿದೆ. ಇಲ್ಲಿಯ ಕಟ್ಟಡಗಳ ಮೇಲೆ ಸೌರ ಫಲಕ ಅಳವಡಿಸಿ ಸೌರ ವಿದ್ಯುತ್ ಉತ್ಪಾದನೆ ಮಾಡಲಾಗುವುದು. ಇಲ್ಲಿಯ ದೈನಂದಿನ ಕೆಲಸ ಕಾರ್ಯಗಳಿಗೆ ಬೇಕಾಗುವ ವಿದ್ಯುತ್​ಗೆ ಗರಿಷ್ಠ ಮಟ್ಟದಲ್ಲಿ ಸೌರಶಕ್ತಿಯನ್ನೇ ಅವಲಂಬಿಸುವುದು. ಮಳೆ ನೀರು ಸಂಗ್ರಹ, ಹಸಿರೀಕರಣ, ಲ್ಯಾಂಡ್ ಸ್ಕೇಪಿಂಗ್, ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಈ ಯೋಜನೆಯ ಭಾಗವಾಗಿದೆ. ಇದು ಪರಿಸರ ಸ್ನೇಹಿ ಕ್ರಮವಾಗಿದೆ. 18 ತಿಂಗಳು ಕಾಮಗಾರಿ ಅನುಷ್ಠಾನ, ಬಳಿಕ 5 ವರ್ಷ ಕಾರ್ಯಾಚರಣೆ ಹಾಗೂ ನಿರ್ವಹಣೆ ಅವಧಿಯಾಗಿದೆ.

ನಾಲ್ಕು ಭಿನ್ನವಾದ ಕೆಲಸಗಳನ್ನು ಒಬ್ಬರೇ ನಿರ್ವಹಿಸಬೇಕಾಗಿರುವುದು ಈ ಯೋಜನೆಯ ಜಟಿಲ ಸಂಗತಿಯಾಗಿದೆ. ಜತೆಗೆ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ನ್ಯಾಷನಲ್ ಗ್ರೀನ್ ಬಿಲ್ಡಿಂಗ್ ಸರ್ಟಿಫಿಕೇಶನ್ (ಎನ್​ಜಿಬಿಸಿ) ಹೊಂದಿರಬೇಕು. ಈ ಮಾನ್ಯತೆ ಹೊಂದಿರುವವರು ಬಹಳ ವಿರಳ. ಪುಣೆ, ಹೈದರಾಬಾದ್, ದೆಹಲಿ, ಇನ್ನಿತರ ಮಹಾನಗರಗಳಲ್ಲಿ ಇರುತ್ತಾರೆ. ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್​ನ ಎಲ್ಲ ಟೆಂಡರ್​ಗಳು ಇ-ಪೋರ್ಟಲ್​ನಲ್ಲಿ ಪ್ರಕಟಿಸುವುದರಿಂದ ಜಾಗತಿಕವಾಗಿ ಗಮನಕ್ಕೆ ಬರುತ್ತದೆ. ಆದರೆ, ಗ್ರೀನ್ ಕ್ಯಾಂಪಸ್​ಗೆ ಆಸಕ್ತಿ ತೋರಿಸಿರುವವರು ಕಡಿಮೆ. ಆದರೂ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಛಲ ಬಿಡದೇ 3ನೇ ಬಾರಿ ಟೆಂಡರ್ ಕರೆದಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಆಯ್ಕೆಯಾಗಿರುವ ರಾಜ್ಯದ 7 ನಗರಗಳಲ್ಲಿ ಯಾವ ನಗರವು ಗ್ರೀನ್ ಕ್ಯಾಂಪಸ್ ಉಪಕ್ರಮಕ್ಕೆ ಮುಂದಾಗಿಲ್ಲ. ದೇಶದ ವಿವಿಧೆಡೆ ಕೆಲ ವಿಶ್ವವಿದ್ಯಾಲಯಗಳು, ಕಂಪನಿಗಳು ಇದನ್ನು ಅಳವಡಿಸಿಕೊಂಡಿದೆ. ಇವುಗಳಿಗೆ ನ್ಯಾಷನಲ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ರೇಟಿಂಗ್ ನೀಡಿವೆ.

ಗ್ರೀನ್ ಕ್ಯಾಂಪಸ್ ಯೋಜನೆಯು ಒಂದು ಒಳ್ಳೆಯ ಉಪಕ್ರಮವಾಗಿದೆ. ಇದನ್ನು ಕೈ ಬಿಡಬಾರದು ಎಂದು ಸ್ಮಾರ್ಟ್ ಸಿಟಿ ಯೋಜನೆಯ ಉನ್ನತ ಮಟ್ಟದ ಸಮಿತಿ ಸಲಹೆ ನೀಡಿದೆ. ಹಾಗಾಗಿ 3ನೇ ಬಾರಿ ಟೆಂಡರ್ ಕರೆದಿದ್ದೇವೆ. | ಎಸ್.ಎಚ್. ನರೇಗಲ್ ವಿಶೇಷಾಧಿಕಾರಿ, ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net