

ಚನ್ನರಾಯಪಟ್ಟಣ: ಕೊಬ್ಬರಿ ಖರೀದಿ ಮರು ನೋಂದಣಿಗೆ ಸರ್ಕಾರ ಮುಂದಾಗಿದ್ದು ಮಾ.4ರಿಂದ ಪ್ರಕಿಯೆ ಆರಂಭವಾಗುವ ನಿರೀಕ್ಷೆ ಇದೆ. ಈ ಕುರಿತು ಮಾ.2ರಂದು ಆದೇಶ ಹೊರಬೀಳಲಿ
ದ್ದು, ರೈತರು ಖರೀದಿ ಕೇಂದ್ರಗಳ ಮುಂದೆ ಜಮಾಯಿಸುವುದು ಬೇಡ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಮನವಿ ಮಾಡಿದರು.
ಕೊಬ್ಬರಿ ಖರೀದಿ ಕೇಂದ್ರ ಪ್ರಕ್ರಿಯೆ ಕುರಿತು ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿದ ಶಾಸಕರು, ಕಳೆದ ವಾರವೇ ಮರು ನೋಂದಣಿಗೆ ಅವಕಾಶವಾಗಬೇಕಿದ್ದು ನಾಫೆಡ್ ಇನ್ನೂ ಹೊಸ ಸಾಫ್ಟ್‌ವೇರ್ ಅಳವಡಿಸದ ಕಾರಣ ವಿಳಂಬವಾಗಿದೆ. ಇದೀಗ ಜಿಲ್ಲಾಧಿಕಾರಿ ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದ್ದಾರೆ. ರೈತರು ಒಂದೆಡೆ ಸೇರಿ ಸಮಸ್ಯೆ ಆಗಬಾರದೆಂಬ ದೃಷ್ಟಿಯಿಂದ ಹೆಚ್ಚುವರಿಯಾಗಿ ಜುಟ್ಟನಹಳ್ಳಿ, ಕಾರೇಹಳ್ಳಿ, ದಿಡಗ ಕೇಂದ್ರದಲ್ಲಿ ತೆರೆಯುವಂತೆ ಮನವಿ ಮಾಡಿದ್ದೆ. ಇದಕ್ಕೊಪ್ಪದ ಡಿಸಿ ಮುಂದೆ ಪರಿಸ್ಥಿತಿ ನೋಡಿ ನಮ್ಮ ಮನವಿ ಪುರಸ್ಕರಿಸಲಿ. ಕೇಂದ್ರಗಳಲ್ಲಿ ಉಂಟಾಗುವ ಜನಸಂದಣಿ ನೋಡಿ ತೀರ್ಮಾನ ತೆಗೆದುಕೊಳ್ಳಲಿ ಎಂದು ಹೇಳಿದರು.
ಪ್ರಾರಂಭದಲ್ಲಿ ರಾಜ್ಯ ಸರ್ಕಾರ ಸರಿಯಾದ ಮಾರ್ಗಸೂಚಿ ನೀಡದ ಹಿನ್ನೆಲೆಯಲ್ಲಿ ಸಮಸ್ಯೆಗಳಾಗಿದ್ದವು. ನಾಫೆಡ್ ಹೊಸ ಸಾಫ್ಟ್‌ವೇರ್ ಕಾರ್ಯವೈಖರಿ ಬಗ್ಗೆ ಮಾಹಿತಿಯೂ ಶೀಘ್ರ ಅಧಿಕಾರಿಗಳಿಗೆ ಸಿಗಲಿದೆ. ಮಾ.4ರಿಂದ ನೋಂದಣಿ ಶುರುವಾಗಲಿದ್ದು, ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಬಯೋಮೆಟ್ರಿಕ್ ಶೀಘ್ರವಾಗಿ ಆಗುವ ರೀತಿಯಲ್ಲಿ ತ್ವರಿತಗತಿಯಲ್ಲಿ ಸಾಫ್ಟ್‌ವೇರ್ ಅಳವಡಿಸಬೇಕು ಎಂದರು.
ತಾಲೂಕಿನ ಟಿಎಪಿಸಿಎಂಎಸ್ ಅಭಿವೃದ್ಧಿಗಾಗಿ ರಾಜ್ಯ ಮಾರಾಟ ಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ ಅವರು ನೀಡಿದ ಒಂದೂವರೆ ಲಕ್ಷ ರೂ.ಗಳ ಚೆಕ್ ಅನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷರಿಗೆ ಹಸ್ತಾಂತರಿಸಿ ಮಾತನಾಡಿ, ಮೂರು ವರ್ಷಗಳಲ್ಲಿ ಟಿಎಪಿಸಿಎಂಎಸ್‌ಗೆ 31 ಲಕ್ಷ ರೂ., ವಿವಿಧ ಕೃಷಿಪತ್ತಿನ ಸಹಕಾರ ಸಂಘಗಳಿಗೆ 30 ಲಕ್ಷ ರೂ.ನೀಡಲಾಗಿದೆ. ಇದರಿಂದ ಆಯಾ ಸಂಸ್ಥೆಗಳ ಅಭಿವೃದ್ಧಿಗೆ ಹಣವನ್ನು ಬಳಸಿಕೊಳ್ಳಬಹುದು ಎಂದರು.
ನಾಫೆಡ್ ಅಧಿಕಾರಿ ಕಾವ್ಯಾ, ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಎಂ.ನಂಜಪ್ಪ, ಉಪಾಧ್ಯಕ್ಷ ಜಗದೀಶ್, ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ, ನಿರ್ದೇಶಕರಾದ ಪರಮಕೃಷ್ಣೇಗೌಡ, ಎಂ.ಆರ್.ಅನಿಲ್‌ಕುಮಾರ್, ವಿ.ಎನ್.ರಾಜಣ್ಣ, ಮನು, ಮುನಿಸ್ವಾಮಿ, ಮುಖಂಡರಾದ ವಿ.ಎನ್.ಮಂಜುನಾಥ್ ಇದ್ದರು.