

ಸೊರಬ: ತಾಲೂಕಿನ ಚಂದ್ರಗುತ್ತಿಯ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬಾ ದೇವಿ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಕಳ್ಳತನಕ್ಕೆ ಯತ್ನ ನಡೆದಿದ್ದು ದುರುಳರು ಕಿತ್ತೊಗೆದಿದ್ದ ಶ್ರೀ ದೇವಿಯ ಮೂರ್ತಿಯ ಮುಖವಾಡವನ್ನು ಸಕಲ ವಿಧಿ ವಿಧಾನಗಳೊಂದಿಗೆ ಗುರುವಾರ ಮರು ಪ್ರತಿಷ್ಠಾಪನೆ ಮಾಡಲಾಯಿತು. ದೇವಸ್ಥಾನಕ್ಕೆ ಮೂರು ದ್ವಾರಗಳಿದ್ದು ಪೂರ್ವ ಬಾಗಿಲಿನ ಬೀಗ ಮುರಿದು ದೇವಸ್ಥಾನ ಪ್ರವೇಶ ಮಾಡಿರುವ ಕಳ್ಳರು ಗರ್ಭಗುಡಿಯಲ್ಲಿದ್ದ ಶ್ರೀ ದೇವಿಯ ಮೂರ್ತಿಯ ಮುಖವಾಡವನ್ನು ಕಿತ್ತಿದ್ದಾರೆ. ಕಳೆದ ಆಗಸ್ಟ್ 1ರಂದು ಅಧಿಕ ಶ್ರಾವಣ ಹುಣ್ಣಿಮೆ ಅಂಗವಾಗಿ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಈ ವೇಳೆ ಕಾಣಿಕೆ ಹುಂಡಿಯಲ್ಲಿ ಅಧಿಕ ಮೊತ್ತದ ಕಾಣಿಕೆ ಸಂಗ್ರಹವಾಗುತ್ತದೆ ಎಂದು ಭಾವಿಸಿ ಕಳ್ಳತನಕ್ಕೆ ಯತ್ನ ನಡೆದಿದೆ ಎನ್ನಲಾಗಿದೆ. ಇದಕ್ಕೂ ಮೊದಲ ಶೂಲದ ಬೀರಪ್ಪ ದೇವಸ್ಥಾನದಲ್ಲಿಯೂ ಕಳ್ಳತನ ಯತ್ನ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಶೀಲ್ದಾರ್ ಹುಸೇನ್ ಸರಕಾವಸ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್. ಶಿವಪ್ರಸಾದ್, ಸಿಪಿಐ ಎಲ್.ರಾಜಶೇಖರ್ ಹಾಗೂ ಕ್ರೈಮ್ ಪಿಎಸ್‌ಐ ಮಾಳಪ್ಪ ಚಿಪ್ಪಲಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಡರಾತ್ರಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಈ ಸಂಬಂಧ ಸೊರಬ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಿಯ ಮೂರ್ತಿಯ ಮುಖವಾಡ ಕಳ್ಳತನಕ್ಕೆ ಯತ್ನ ನಡೆದಿರುವುದು ಭಕ್ತರಲ್ಲಿ ಬೇಸರಕ್ಕೆ ಕಾರಣವಾಗಿದೆ. ಇನ್ನು ಜಿಲ್ಲೆಯಲ್ಲಿಯೇ ‘ಎ’ ಗ್ರೇಡ್ ದೇವಸ್ಥಾನ ಎಂಬ ಖ್ಯಾತಿಗೆ ಶ್ರೀ ರೇಣುಕಾಂಬೆ ದೇವಸ್ಥಾನ ಪಾತ್ರವಾಗಿದ್ದು ಸರ್ಕಾರಕ್ಕೆ ದೇವಸ್ಥಾನದಿಂದ ವಾರ್ಷಿಕವಾಗಿ ಸುಮಾರು 2 ಕೋಟಿ ರೂ., ಕಾಣಿಕೆ ರೂಪದಲ್ಲಿ ಆದಾಯ ದೊರೆಯುತ್ತಿದೆ. ಶ್ರೀ ರೇಣುಕಾಂಬೆ ದೇವಸ್ಥಾನಕ್ಕೆ ಸೂಕ್ತ ಭದ್ರತೆ ಇಲ್ಲದೆ ಇರುವುದರಿಂದ ಇಂತಹ ಘಟನೆಗಳು ನಡೆದಿದೆ. ದೇವಸ್ಥಾನಕ್ಕೆ ಕಾವಲುಗಾರರ ನೇಮಕ, ಸಿಸಿ ಕ್ಯಾಮರಾ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್, ಗ್ರಾಪಂ ಸದಸ್ಯರಾದ ಎಂ.ಪಿ. ರತ್ನಾಕರ, ರೇಣುಕಾಪ್ರಸಾದ್, ತಾಪಂ ಮಾಜಿ ಸದಸ್ಯ ಸುನೀಲ್ ಗೌಡ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ತಹಸೀಲ್ದಾರ್‌ಗೆ ಒತ್ತಾಯ ಮಾಡಿದ್ದಾರೆ.