ಕ್ವಾರಂಟೈನ್ ಪೂರೈಸಿದವರಿಗೆ ಮರು ಪರೀಕ್ಷೆ, ಶೋಭಾ ಕರಂದ್ಲಾಜೆ ಹೇಳಿಕೆ

kit
Published on

ಉಡುಪಿ: ಜಿಲ್ಲೆಗೆ ವಿದೇಶಗಳಿಂದ ಬಂದ ವ್ಯಕ್ತಿಗಳ ಕ್ವಾರಂಟೈನ್ ಅವಧಿ ಭಾನುವಾರಕ್ಕೆ ಮುಕ್ತಾಯಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಅವರ ರಕ್ತದ ಮಾದರಿ ಪುನಃ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಉಡುಪಿ ಶಾರದಾ ಕಲ್ಯಾಣ ಮಂಟಪದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಜಿಲ್ಲೆಯಲ್ಲಿ ಇದುವರೆಗೆ ಮೂರು ಕರೊನಾ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ. ಕರೊನಾ ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತ ಅತ್ಯಂತ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಆಹಾರ ಕಿಟ್ ವಿತರಣೆಗೆ ಚಾಲನೆ: ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿನ ಬಡವರಿಗೆ 95 ಕ್ವಿಂಟಾಲ್ ಅಕ್ಕಿ ಉಚಿತವಾಗಿ ವಿತರಿಸಲಾಗುತ್ತಿದೆ. ಹೆಚ್ಚಿನ ಅಗತ್ಯ ಕಂಡುಬಂದಲ್ಲಿ ಪೂರೈಕೆ ಮಾಡಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿದರು. ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಉಡುಪಿ ನಗರಸಭೆಯ ಎಲ್ಲ ವಾರ್ಡ್‌ಗಳ ಬಡ ಜನತೆಗೆ 1001 ಆಹಾರದ ಕಿಟ್‌ಗಳ ಪೂರೈಕೆಗೆ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಸದರು ಚಾಲನೆ ನೀಡಿದರು. ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net