ಎಲ್ ಬಿಎ ಪದ್ಧತಿ ವಾಪಸ್ ಪಡೆಯಿರಿ

Published on

ಹುಬ್ಬಳ್ಳಿ: ಪಾಠ ಆಧಾರಿತ ಮೌಲ್ಯಾಂಕನ (ಲೆಸನ್ ಬೇಸ್ಡ ಅಸೆಸ್ಮೆಂಟ್- ಎಲ್ ಬಿಎ) ಪ್ರತಿ ಪಾಠದ ನಂತರ ಅಳವಡಿಸುವುದನ್ನು ನಿಲ್ಲಿಸಬೇಕೆಂದು ಧಾರವಾಡ ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ ಆಗ್ರಹಿಸಿದೆ.

ಇತ್ತೀಚೆಗೆ ಹೊರಡಿಸಿದ ಸುತ್ತೋಲೆ ಪ್ರಕಾರ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ರಾಜ್ಯ ಪಠ್ಯ ಕ್ರಮವನ್ನು ಅನುಸರಿಸಿ 1ರಿಂದ 10ನೇ ತರಗತಿ ಶಾಲೆಗಳಿಗೆ (ಸರಕಾರಿ, ಅನುದಾನಿತ ಮತ್ತು ಖಾಸಗಿ ಅನುದಾನ ರಹಿತ ಶಾಲೆಗಳಿಗೆ) ಪ್ರತಿ ಪಾಠ ಬೋಧನೆ ನಂತರ "ಪಾಠ ಆಧಾರಿತ ಮೌಲ್ಯಾಂಕನ ಲೆಸನ್ ಬೇಸ್ಡ ಅಸೆಸ್ಮೆಂಟ್ ಯುನಿಟ್ ಟೆಸ್ಟ್ (ಎಲ್ ಬಿಎ), ಮೌಲ್ಯ ಮಾಪನ ಮಾಡಿ ಅಂಕಗಳನ್ನು ಸ್ಟಾಟ್ಸ್ ನಲ್ಲಿ (ಪ್ರತಿ ವಾರದಲ್ಲಿ 5-6 ಪರೀಕ್ಷೆ ಮಾಡಿ) ಕಳಿಸಿ ಕೊಡಬೇಕಾಗಿದೆ.

ಆದರೆ, ಈ ಪದ್ದತಿ ಅವೈಜಾನಿಕವಾಗಿರುತ್ತದೆ. ಇದಕ್ಕೆ ಶಿಕ್ಷಕರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಶಿಕ್ಷಕರು ಇದನ್ನೇ ಕ್ಲರಿಕಲ್ ವರ್ಕ್ ಮಾಡುತ್ತ ಕುಳಿತರೆ ಪಾಠ ಬೋಧಿಸಲು ಅವರಿಗೆ ಸಮಯ ಸಾಲುವದಿಲ್ಲ. ಆದ್ದರಿಂದ ಪಾಠ ಆಧಾರಿತ ಮೌಲ್ಯಾಂಕನ ಮಾಡಿ, ಅದನ್ನು ಸ್ಟಾಟ್ಸ್ ನಲ್ಲಿ ಅಪ್ಲೋಡ್ ಮಾಡುವುದನ್ನು ಕೂಡಲೆ ನಿಲ್ಲಿಸಬೇಕು ಎಂದು ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧ ಪಟ್ಟಂತೆ ರಾಜ್ಯದ ಪ್ರತಿಯೊಂದು ಜಿಲ್ಲೆಯ ಬಹುತೇಕ ಶಿಕ್ಷಕರು, ಶಿಕ್ಷಕರ ಸಂಘಗಳು ಮತ್ತು ಆಡಳಿತ ಮಂಡಳಿಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಆದಷ್ಟು ಶೀಘ್ರ ಸುತ್ತೊಲೆ ಮುಖಾಂತರ ಎಲ್ ಬಿಎ ಪದ್ದತಿಯನ್ನು ಹಿಂದಕ್ಕೆ ಪಡೆಯಬೇಕೆಂದು ಸಂಘದ ಪ್ರಮುಖರಾದ ಜಯಪ್ರಕಾಶ ಟೆಂಗಿನಕಾಯಿ, ಪ್ರೊ. ಎಸ್.ಕೆ. ಆದಪ್ಪನವರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net