

*ಗ್ರಾಮ ಮಟ್ಟದಲ್ಲಿ ಉತ್ತಮ ಶಿಕ್ಷಣದ ಜೊತೆಗೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ : ರಾಜ್ಯಪಾಲರು*
ಗದಗ: ಗ್ರಾಮೀಣ ಅಭಿವೃದ್ಧಿಗಾಗಿ, ಪಂಚಾಯತ್ ರಾಜ್, ಶಿಕ್ಷಣ, ಕೃಷಿ ಮತ್ತು ಇತರ ಉದ್ಯೋಗ ಸಂಬಂಧಿತ ಕೆಲಸಗಳನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಬಹಳ ಮುಖ್ಯ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವದಲ್ಲಿ ಭಾಗವಹಿಸಿ, ಅವರು ಮಾತನಾಡಿದರು.
ಹಳ್ಳಿಗಳನ್ನು ಸ್ವಾವಲಂಬಿ ಮತ್ತು ಸುಸಜ್ಜಿತವಾಗಿ ಮಾಡದಿದ್ದರೆ, ದೇಶದ ಸರಿಯಾದ ಮತ್ತು ಸಮತೋಲಿತ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಸಾರ್ವತ್ರಿಕವಾಗಿ ಒಪ್ಪಿಕೊಂಡ ಸತ್ಯವಾಗಿದೆ. ಶಿಕ್ಷಣ, ಕೃಷಿ ಮತ್ತು ಇತರ ಉದ್ಯೋಗ ಸಂಬಂಧಿತ ಕೆಲಸಗಳನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಪ್ರತಿಯೊಂದು ಗ್ರಾಮ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪಂಚಾಯತ್ ರಾಜ್ ವ್ಯವಸ್ಥೆಯು ಭಾರತೀಯ ದೃಷ್ಟಿಕೋನದಿಂದ ಬಹಳ ಪ್ರಾಚೀನ ಕಲ್ಪನೆಯಾಗಿದೆ. ನಮ್ಮ ಮೂರು ಹಂತದ ಆಡಳಿತ ವ್ಯವಸ್ಥೆಯಲ್ಲಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜೊತೆಗೆ ಸ್ಥಳೀಯ ಆಡಳಿತದ ಘಟಕವಾಗಿ ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು ಸಾಂವಿಧಾನಿಕ ತಿದ್ದುಪಡಿಯ ಮೂಲಕ, ಪಂಚಾಯತ್ ರಾಜ್ ವ್ಯವಸ್ಥೆಗೆ ಹೆಚ್ಚು ಸಮಗ್ರ ಅಧಿಕಾರವನ್ನು ನೀಡುವ ಮೂಲಕ ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ಯುವಜನರ ವಲಸೆಯು ಗಂಭೀರ ಸಮಸ್ಯೆಯಾಗಿದೆ, ನಗರಗಳ ಆರೋಗ್ಯಕ್ಕೆ ಹಾನಿಕಾರಕವಲ್ಲ ಆದರೆ ಹಳ್ಳಿಗಳ ಅಭಿವೃದ್ಧಿಯಾಗಬೇಕೆಂದರೆ, ಈ ವಲಸೆ ಹೋಗುವುದು ಒಳ್ಳೆಯದಲ್ಲ. ಜನತೆ ವಲಸೆ ಹೋಗುವುದನ್ನು ತಡೆಯಬೇಕಾದರೆ ಗ್ರಾಮಗಳಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಗ್ರಾಮ ಅಭಿವೃದ್ಧಿಯಿಂದ ಇಡೀ ಸಮಾಜ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಜನಹಿತ ಗ್ರಾಮೀಣ ಹಿತ ದೇಶದ ಹಿತಕ್ಕಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಪ್ರಾಚೀನ ಕಾಲದಲ್ಲಿ ಹಳ್ಳಿಗಳಲ್ಲಿ ಮುಖಂಡರ ನೇತೃತ್ವದಲ್ಲಿ ನ್ಯಾಯ ಮಾಡಿ ಸಮಸ್ಯೆ ಇತ್ಯರ್ಥ ಮಾಡುತ್ತಿದ್ದರು. ಈಗಲೂ ಕೆಲವು ಗ್ರಾಮಗಳಲ್ಲಿ ವ್ಯವಸ್ಥೆ ಮುಂದುವರೆದಿದೆ. ಗ್ರಾಮದಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣದ ಜೊತೆ ಜೊತೆಗೆ ಉದ್ಯೋಗ ಕಲ್ಪಿಸುವಂತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಹಿಂದಿನ ಕಾಲದಲ್ಲಿ ಬಡವರ ಕಲ್ಯಾಣಕ್ಕಾಗಿ ಅಂತ್ಯೋದಯ ಕಾರ್ಯಕ್ರಮವಿತ್ತು. ಈ ರೀತಿಯ ಕಾರ್ಯಕ್ರಮಗಳು ಪ್ರಸ್ತುತ ದಿನಗಳಲ್ಲಿ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ವಿಶ್ವವಿದ್ಯಾಲಯವು ಭಾರತದಲ್ಲೇ ಒಂದು ವಿಶಿಷ್ಟವಾದ ವಿಶ್ವವಿದ್ಯಾಲಯವಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯವನ್ನು ಪರಿಗಣಿಸುತ್ತಿದೆ. ಈ ಘಟಿಕೋತ್ಸವ ಸಮಾರಂಭದಲ್ಲಿ ಸಿ ನಾರಾಯಣ ಸ್ವಾಮಿ ಮತ್ತು ಚಿರಂಜೀವಿ ಸಿಂಗ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಅವರನ್ನು ಅಭಿನಂದಿಸುತ್ತೇನೆ ಹಾಗೂ ಅವರ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆ ಎಂದರು.
ಗಳಿಸಿದ ಜ್ಞಾನದೊಂದಿಗೆ, ಮತ್ತು ಮುಂಬರುವ ಪೀಳಿಗೆಗೆ ಸ್ಫೂರ್ತಿಯ ಮೂಲವಾಗಬೇಕು ಮತ್ತು ಏಕ್ ಭಾರತ್ - ಶ್ರೇಷ್ಠ ಭಾರತ ಮತ್ತು ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಚಿವ ಪ್ರಿಯಾಂಕ ಖರ್ಗೆ, ಕೇಂದ್ರ ಪಂಚಾಯತ್‌ರಾಜ್ ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಟಿ.ಆರ್.ರಘುನಂದನ್, ವಿವಿ ಕುಲಪತಿ ವಿಷ್ಣುಕಾಂತ್ ಎಸ್.ಚಟಪಲ್ಲಿ ಹಾಜರಿದ್ದರು.