ಇಂದಿನ ವಿದ್ಯಾರ್ಥಿ ಯುವಶಕ್ತಿಯೇ, ಮುಂದಿನ ರಾಷ್ಟ್ರ: ಬಿ. ಕೆ. ರವಿ

29GDG05
Published on

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವಾದ “ದೀಕ್ಷಾರಂಭ” ಕಾರ್ಯಕ್ರಮವು ವಿಶ್ವವಿದ್ಯಾಲಯದ ನಾಗಾವಿ ಆವರಣದಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ. ಕೆ. ರವಿ ಅವರು ಮಾತನಾಡಿ ವಿದ್ಯಾರ್ಥಿಗಳು ಗುರಿಯನ್ನು ಹೊಂದಿರಬೇಕು, ಗುರುವಿನ ಮಾರ್ಗದರ್ಶನವನ್ನು ಪಡೆಯಬೇಕು. ವಿದ್ಯಾರ್ಥಿಗಳು ತಂದೆ-ತಾಯಿಗಳ ಆಶಯವನ್ನು ಈಡೇರಿಸುವಂತವರಾಗಬೇಕು. ಶ್ರದ್ಧೆ, ಪರಿಶ್ರಮ, ಹೆಚ್ಚಿನ ಓದು ಇದ್ದಾಗ ಮಾತ್ರ ವಿದ್ಯಾರ್ಥಿಗಳು ಯಶಸ್ಸನ್ನು ಗಳಿಸಲು ಸಾಧ್ಯ, ಹಾಗೂ ‘ಇಂದಿನ ವಿದ್ಯಾರ್ಥಿ ಯುವಶಕ್ತಿಯೇ, ಮು ಂದಿನ ರಾಷ್ಟ್ರದ ಶಕ್ತಿ’ ಇದನ್ನು ಅರಿತು ವಿದ್ಯಾರ್ಥಿಗಳು ಅಧ್ಯಯನವನ್ನು ಮಾಡಬೇಕು ಎಂದು ಅಭಿಪ್ರಾಯಪಟ್ಟರು. ದೀಕ್ಷಾರಂಭ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ ಪರಮಪೂಜ್ಯ ನಂದಿವೇರಿ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಮಾತನಾಡಿ ನಿಜವಾದ ಶಿಷ್ಯ ಜ್ಞಾನ, ಬೆಳಕು, ದಾರಿ, ಅರಿವನ್ನು ಹುಡುಕಿಕೊಂಡು ಬರುತ್ತಾರೆ. ಗುರು ಎಂದರೆ ಬೆಳಕು, ಗುರು ಎಂದರೆ ದಾರಿ, ಅಂತಹ ಗುರುಗಳಿಂದ ವಿದ್ಯೆ ಮತ್ತು ಕೌಶಲ್ಯವನ್ನು ಪಡೆದ ವಿದ್ಯಾರ್ಥಿಗಳು ಗ್ರಾಮ ಮತ್ತು ಸಮಾಜ ಕಟ್ಟುವ ದೀಕ್ಷಾರಂಭ ಇಂದಿನ ವಿದ್ಯಾರ್ಥಿಗಳಿಗೆ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಡಾ. ಸುರೇಶ್ ವಿ. ನಾಡಗೌಡರ ಅವರು ಸ್ವಾಗತ ಮತ್ತು ಆಶಯ ನುಡಿಗಳನ್ನಾಡಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ಕ್ಷೇತ್ರಗಳ ಅಭಿವೃದ್ಧಿ ದೃಷ್ಟಿಕೋನವನ್ನು ಇಟ್ಟುಕೊಂಡು ಸ್ಥಾಪಿತವಾದ ವಿಶ್ವವಿದ್ಯಾಲಯ ಕನಸನ್ನು ಈಡೇರಿಸಲು ಕಳೆದ ಏಳು ವರ್ಷಗಳ ಹಿಂದೆ ಅಂದಿನ ಮಾನ್ಯ ಗ್ರಾಮೀಣಾಭಿವೃದ್ಧಿ ಸಚಿವರು ಡಾ. ಎಚ್. ಕೆ. ಪಾಟೀಲ್‌ರವರ ಆಶಯದಂತೆ ಈ ವಿಶ್ವವಿದ್ಯಾಲಯ ಎತ್ತರಕ್ಕೆ ಬೆಳೆಯುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಅಭಿಪ್ರಾಯಪಟ್ಟರು. ಅಧ್ಯಕ್ಷೀಯ ನುಡಿಗಳನ್ನಾಡಿದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ, ವಿಷ್ಣುಕಾಂತ್ ಎಸ್. ಚಟಪಲ್ಲಿ ಅವರು ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಉತ್ತಮ ರೀತಿಯಲ್ಲಿ ವಿದ್ಯಾರ್ಜನೆಯನ್ನು ಮಾಡಿ, ಗ್ರಾಮಗಳ ಅಭಿವೃದ್ಧಿ ಮತ್ತು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಆಚರಿಸಲಾಯಿತು. ಅತಿಥಿಗಳ ಪರಿಚಯವನ್ನು ಡಾ. ಲಿಂಗರಾಜ ನಿಡುವಣಿ ಇವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಯೋಜಕರಾದ ವಿಜಯಮಹಾಂತೇಶ ಕಣವಿ, ಡಾ. ದೀಪಾ ಪಾಟೀಲ್, ವಿಶ್ವವಿದ್ಯಾಲಯದ ಅಧಿಕಾರಿವರ್ಗ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 ಮುಂಜಾನೆಯ ಔಪಚಾರಿಕ ಕಾರ್ಯಕ್ರಮದ ನಂತರ ವಿಶ್ವವಿದ್ಯಾಲಯದಲ್ಲಿ ಕೈಗೊಳ್ಳಲಾಗುತ್ತಿರುವ ವಿವಿಧ ಶೈಕ್ಷಣಿಕ, ಸಂಶೋಧನಾ, ತರಬೇತಿ, ವಿಸ್ತೀರ್ಣ ಚಟುವಟಿಕೆ ಹಾಗೂ ವಿವಿಧ ಕೋಶಗಳ ಸಂಯೋಜಕರು ಆಯಾ ವಿಭಾಗಗಳ ಪರಿಚಯ ನೀಡಿದರು. ತದನಂತರ ಡಾ. ಪ್ರಕಾಶ್ ಭಟ್ ಇವರಿಂದ ಗ್ರಾಮೀಣಾಭಿವೃದ್ಧಿ ವಿಷಯಕ್ಕೆ ಕುರಿತಂತೆ ಸಂವಾದ ಕಾರ್ಯಕ್ರಮ ಜರುಗಿತು. ಎರಡು ದಿನದ ಈ ಕಾರ್ಯಕ್ರಮವು ಮೊದಲ ದಿನದಂದು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಕಲಿಕಾ ಚಟುವಟಿಕೆ ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ವಿವಿಧ ಕಲಿಕಾ ಆಟಗಳನ್ನು ಆಯೋಜಿಸುವುದರೊಂದಿಗೆ ಸಂಪನ್ನಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net