ಮಳೆನೀರು ಇಂಗಿಸುವ ಕೆಲಸವಾಗಲಿ ; ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸಲಹೆ

29Tmk_Eshwarappa_Antarjala_02
Published on

ತುಮಕೂರು: ಮಳೆನೀರನ್ನು ಇಂಗಿಸುವ ಕಾರ್ಯವಾಗಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಕುಂಚಿಟಿಗರ ಸಮುದಾಯ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ದಿ ಆರ್ಟ್ ಆಫ್ ಲಿವಿಂಗ್ ಸಹಯೋಗದಲ್ಲಿ ಅನುಷ್ಠಾನಗೊಳಿಸುತ್ತಿರುವ ಅಂತರ್ಜಲ ಚೇತನ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಭೂಮಿಯ ಮೇಲೆ ಮಾನವನ ಅತಿಕ್ರಮಣದಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿದ್ದು, ಮಳೆ ನೀರು ಇಂಗಿಸುವ ಮೂಲಕ ಅಂತರ್ಜಲ ವೃದ್ಧಿಸಿ ಸಮತೋಲನ ಕಾಯ್ದುಕೊಳ್ಳುವ ಕೆಲಸವಾಗಬೇಕಿದೆ. ಕೊಳವೆಬಾವಿಗಳನ್ನು ಕೊರೆದು ಭೂಮಿಯಿಂದ ಹೊರ ತೆಗೆದ ನೀರನ್ನು ಮತ್ತೆ ಮರುಪೂರಣ ಮಾಡುವುದು ಅಂತರ್ಜಲ ಚೇತನದ ಉದ್ದೇಶವಾಗಿದೆ ಎಂದರು.

1861 ಕೋಟಿ ರೂ., ಅನುದಾನ: ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಸಹಯೋಗದಲ್ಲಿ ಅಂತರ್ಜಲ ಹೆಚ್ಚಿಸುವ ಪೂರಕ ಕಾಮಗಾರಿಗಳಿಗೆ ನರೇಗಾ ಯೋಜನೆಯಡಿ 1861 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಈಶ್ವರಪ್ಪ ತಿಳಿಸಿದರು.

ನರೇಗಾ ಅಡಿ 249 ರೂ. ಇದ್ದ ಕೂಲಿ ಹಣವನ್ನು 275 ರೂ. ಗಳಿಗೆ ಹೆಚ್ಚಿಸಲಾಗಿದೆ. ದುಡಿಯುವ ಕೈಗಳಿಗೆ ಕೆಲಸ ಕೊಡುವುದರ ಜತೆಗೆ ಸಾಮಾಜಿಕ ಆಸ್ತಿಗಳ ನಿರ್ಮಾಣ ಹಾಗೂ ವೈಯಕ್ತಿಕ ಹೊಲ, ಮನೆ ಕಾಮಗಾರಿಗಳನ್ನು ಕೈಗೊಂಡು ದುಡಿಯುವವರ ಕೂಲಿ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಜಾಬ್ ಕಾರ್ಡ್ ಸ್ಥಳದಲ್ಲೇ ನೀಡಿ ಉದ್ಯೋಗ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು. ಜಿಪಂ ಆವರಣದಲ್ಲಿ ಜಿಲ್ಲಾ ಸಂಪನ್ಮೂಲ ಕೇಂದ್ರದ ಕಟ್ಟಡವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಿದರು.

ಅಂತರ್ಜಲ ವೃದ್ಧಿಸಿ: ನರೇಗಾ ಯೋಜನೆಯಡಿ ಉತ್ತಮ ಕಾರ್ಯ ಕೈಗೊಳ್ಳಲು ಹೆಚ್ಚು ಅವಕಾಶ ನೀಡಿದ್ದು, ಹಳ್ಳಿಗಾಡಿನ ನಿರುದ್ಯೋಗಿಗಳು ಪ್ರಯೋಜನ ಪಡೆಯುವ ಮೂಲಕ ಮುಚ್ಚಿಹೋಗಿರುವ ಕೆರೆ-ಕಾಲುವೆ, ಹಳ್ಳ-ಕೊಳ್ಳಗಳಲ್ಲಿ ಮಳೆ ನೀರು ಹರಿದುಹೋಗುವುದನ್ನು ನಿಲ್ಲಿಸಿ ಅಂತರ್ಜಲ ವೃದ್ಧಿಸುವ ಕಾರ್ಯ ಮಾಡಬೇಕಿದೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದರು.

ಜಿಪಂ ಅಧ್ಯಕ್ಷೆ ಲತಾ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲ ಜಯರಾಂ, ಬಿ.ಸತ್ಯನಾರಾಯಣ, ಬಿ.ಸಿ.ನಾಗೇಶ್, ಡಾ.ಎಚ್.ಡಿ.ರಂಗನಾಥ್, ಉಪಾಧ್ಯಕ್ಷೆ ಶಾರದಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಜಿಪಂ ಸಿಇಒ ಶುಭಾಕಲ್ಯಾಣ್ ಉಪಸ್ಥಿತರಿದ್ದರು.

1000 ಕೋಟಿ ರೂಪಾಯಿ ಮೀಸಲು (ತುರುವೇಕೆರೆ): ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ರಾಜ್ಯದಲ್ಲಿ 1000 ಕೋಟಿ ರೂಪಾಯಿ ಮೀಸಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಬೈತರಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಮ್ಮನಹಳ್ಳಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಅಂತರ್ಜಲ ಚೇತನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಬಡವರಿಗೆ ಉದ್ಯೋಗ ಸಿಗಬೇಕೆಂದು ನರೇಗಾ ಯೋಜನೆಯಿಂದ ಅಂರ್ತಜಲ ವೃದ್ಧಿಗೆ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ 1831 ಕೋಟಿ ರೂಪಾಯಿ ನೀಡಿದ್ದಾರೆ. ಅದರಲ್ಲಿ 800 ಕೋಟಿ ರೂಪಾಯಿ ಹಿಂದಿನ ಬಾಕಿ ನೀಡಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಅಟಲ್ ಭೂಜಲ ಯೋಜನೆಯಲ್ಲಿ 6 ತಾಲೂಕು ಆಯ್ಕೆ ಮಾಡಿದ್ದು, ಜಾಲಾಮೃತ ಯೋಜನೆಯಲ್ಲಿ 4 ತಾಲೂಕುಗಳನ್ನು ಸೇರಿಸಿ ಒಟ್ಟು 10 ತಾಲೂಕಿನಲ್ಲಿ ಅಂರ್ತಜಲ ಅಭಿವೃದ್ಧಿ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. ಪೈಲಟ್ ಪ್ರಾಜೆಕ್ಟ್ ಮಾಡಿದ್ದು, ಇದು ಉತ್ತಮ ಯೋಜನೆಯೆಂದು ವಿಶ್ವ ಬ್ಯಾಂಕ್ ನಮ್ಮನ್ನು ಅಭಿನಂದಿಸಿದ್ದಾರೆ ಎಂದರು.

ಅಂರ್ತಜಲ ಚೇತನ ಯೋಜನೆಯ ರೂಪುರೇಷೆ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಶಾಸಕರಾದ ಮಸಾಲ ಜಯರಾಮ್, ಡಾ.ರಂಗನಾಥ್, ಬಿ.ಸಿ. ನಾಗೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಉಪವಿಭಾಗಾಧಿಕಾರಿ ನಂದಿನಿ, ತಹಸೀಲ್ದಾರ್ ಆರ್.ನಯಿಂಉನ್ನೀಸಾ, ಜಿಪಂ ಜಿಲ್ಲಾ ಮಾಜಿ ಸದಸ್ಯ ಎನ್.ಆರ್.ಜಯರಾಮ್, ತಾಪಂ ಸದಸ್ಯರಾದ ಮಹಾಲಿಂಗಪ್ಪ, ಬೈರಪ್ಪ, ಮಂಜುನಾಥ್ ಇದ್ದರು.

ಕುಡಿಯುವ ಸಿಹಿ ನೀರು ಮಳೆಯಿಂದ ಲಭ್ಯವಾಗುತ್ತಿದ್ದು, ನೀರಿನ ಮೂಲಗಳಾದ ಕೆರೆ, ಹಳ್ಳ, ಬಾವಿಗಳಲ್ಲಿ ನೀರು ಸಂಗ್ರಹಿಸಿಡುವ ಕೆಲಸ ಹಾಗೂ ನೀರಿನ ಮಿತ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜತೆಗೆ ಅಂತರ್ಜಲ ಹೆಚ್ಚಿಸುವ ಕಾರ್ಯ ಈ ಯೋಜನೆಯದಾಗಿದೆ. ಜೆ.ಸಿ.ಮಾಧುಸ್ವಾಮಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net