ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ; ಆರ್‌ಡಿಪಿಆರ್ ಆಯುಕ್ತ ಅನಿರುದ್ಧ್ ಶ್ರವಣ್ ಸೂಚನೆ ನರೇಗಾದಲ್ಲಿ ಅವ್ಯವಹಾರ ಅರೋಪ

13 bgp nrega commisioner
Published on

ಬಾಗೇಪಲ್ಲಿ : ನರೇಗಾ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿವೆ, ಸರ್ಕಾರದ ಹಣ ದುರುಪಯೋಗವಾಗಿರುವ ಕುರಿತು ವಿಚಾರಣೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತ ಪಿ.ಅನಿರುದ್ಧ್ ಶ್ರವಣ್ ಎಚ್ಚರಿಕೆ ನೀಡಿದರು.

ತಾಲೂಕಿನ ಮಿಟ್ಟೇಮರಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಿಸಿರುವ ಉದ್ಯಾನ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿ, ನರೇಗಾ ಕಾಮಗಾರಿಯಲ್ಲಿ ಯಂತ್ರಗಳನ್ನು ಬಳಸಿ ಅಕ್ರಮ ನಡೆಸಿದ್ದಾರೆ ಎಂದು ತಾಲೂಕಿನ ಹಲವರು ಗ್ರಾಮೀಣ ಅಭಿವೃದ್ಧಿ ಆಯುಕ್ತಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಯೋಜನೆ ಹಣ ದುರುಪಯೋಗಕ್ಕೆ ಮುಂದಾಗಿರುವ ಇಂಜಿನಿಯರ್, ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಪಂಗೆ ಸೂಚಿಸಲಾಗುವುದು ಎಂದರು. ದೂರುದಾರರು ಹಾಗೂ ಅಕ್ರಮ ಆರೋಪ ಹೊತ್ತವರ ಸಮಕ್ಷದಲ್ಲೇ ವಿಚಾರಣೆ ನಡೆಸುವಂತೆ ತಾಕೀತು ಮಾಡಿದರು.

ಮಿಟ್ಟೇಮರಿ ಪಿಎಚ್‌ಸಿ ನಿರ್ವಹಣೆ, ಮೂಲಸೌಲಭ್ಯ ಹಾಗೂ ವೈದ್ಯರು, ಸಿಬ್ಬಂದಿ ಕೊರತೆ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ಅವರಿಂದ ಮಾಹಿತಿ ಪಡೆದ ಅನಿರುದ್ಧ್, ಆರೋಗ್ಯ ಕೇಂದ್ರದ ಆವರಣದಲ್ಲಿ ನಡೆದಿರುವ ನರೇಗಾ ಕಾಮಗಾಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಯಲ್ಲಂಪಲ್ಲಿ, ನಲ್ಲಪರೆಡ್ಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ನರೇಗಾ ಕಾಮಗಾರಿಗಳನ್ನು ಪರಿಶೀಲಿಸಿ ತಾಪಂ ಅಧಿಕಾರಿಗಳಿಂದ ಪ್ರಗತಿ ಸಾಧನೆ ಕುರಿತು ಮಾಹಿತಿ ಪಡೆದರು. ಕೃಷಿ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ನರೇಗಾ ಸಹಾಯಕ ನಿರ್ದೇಶಕ ನಾರಾಯಣ ಹಾಗೂ ನರೇಗಾ ಇಂಜಿನಿಯರ್‌ಗಳು ಇದ್ದರು.

ಯಂತ್ರಗಳನ್ನು ಬಳಸಬೇಡಿ: ನರೇಗಾ ಕಾಮಗಾರಿಗಳನ್ನು ಯಂತ್ರಗಳ ಬಳಕೆ ಮಾಡದೇ ನಿರ್ವಹಿಸಬೇಕು. ರಾಜಕೀಯ ವ್ಯಕ್ತಿಗಳ ಒತ್ತಡಗಳಿಗೆ ಮಣಿಯದೇ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಆಯುಕ್ತ ಅನಿರುದ್ಧ್ ಶ್ರವಣ್, ಗ್ರಾಮೀಣ ಜನತೆ ನರೇಗಾ ಯೋಜನೆಯ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net