ನಗರದ ಅಭಿವೃದ್ದಿಗೆ ಆರ್‌ಡಿಎ 20 ಕಾಮಗಾರಿಗಳಿಗೆ ಸಿದ್ದತೆ *ಎರಡು ಕಡೆ ಮೊದಲ ಬಾರಿಗೆ ಕ್ಲಾಕ್ ಟವರ್ ನಿರ್ಮಾಣ *ಕಾಮಗಾರಿಗೆ ಜೂ.21 ರಂದು ಸಿಎಂ ಶಂಕು ಸ್ಥಾಪನೆ

raichur
raichur
Published on

ರಾಚಯ್ಯ ಸ್ವಾಮಿ ಮಾಚನೂರು

ರಾಯಚೂರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಮೇಲೆ ಗ್ಯಾರಂಟಿಗಾಗಿ ಸರ್ಕಾರ ಕೋಟಿ ಕೋಟಿ ಖರ್ಚು ಮಾಡುತ್ತಿದೆ. ಅಭಿವೃದ್ಧಿಗಾಗಿ ಸರ್ಕಾರ ಹಣ ಕೊಡುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದೆ. ಆದರೆ ರಾಯಚೂರು ನಗರಾಭಿವೃದ್ದಿ ಪ್ರಾಧಿಕಾರ ಸದ್ದು ಗದ್ದಲ ವಿಲ್ಲದೆ ಹಲವು ಅಭಿವೃದ್ಧಿ ಕೆಲಸಗಳು ಮಾಡಲು ಮುಂದಾಗಿದೆ.

ರಾಯಚೂರು ನಗರದ ಸೌಂದರ್ಯ ಜತೆಗೆ ಸಾರ್ವಜನಿಕರು ಬಳಕೆ ಮಾಡುವ ಗಾರ್ಡನ್‌ಗಳ ಅಭಿವೃದ್ಧಿಗಾಗಿ ವಿಶೇಷ ಅನುದಾನ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ ಮೀಸಲು ಇಟ್ಟಿದ್ದು, ಒಟ್ಟು 9 ಕೋಟಿ ರೂ. ವೆಚ್ಚದಲ್ಲಿ 20 ಕಾಮಗಾರಿಗಳನ್ನು ಅನುಷ್ಠಾನ ಮಾಡಿದ್ದು, ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್ ಕರೆಯಲು ಮುಂದಾಗಿದೆ.

ಏನೇನು ಕಾಮಗಾರಿಗಳು ?

ನಗರದಲ್ಲಿ ಉತ್ತಮವಾದ ಸಾರ್ವಜನಿಕ ಉದ್ಯಾನವನಗಳು ಇಲ್ಲ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು. ಅದರಿಂದ ಆ ಮಾತು ಅಳಿಸಿ ಹಾಕಲು ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ ಆಧ್ಯಕ್ಷ ರಾಜಶೇಖರ ರಾಮಸ್ವಾಮಿ ನೇತೃತದ ತಂಡವು ಒಟ್ಟು 12 ಉದ್ಯಾನವನ ಅಭಿವೃದ್ದಿಗೆ 4 ಕೋಟಿ ರೂ. ಮಂಜೂರು ಮಾಡಿದೆ. ಇದರಲ್ಲಿ ಸಾರ್ವಜನಿಕ ಉದ್ಯಾನವನಕ್ಕೆ 2 ಕೋಟಿ ರೂ. ನೀಡಿದರೇ ಉಳಿದ 12 ಉದ್ಯಾನವನಕ್ಕೆ 2 ಕೋಟಿ ರೂ. ನೀಡಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಡಾ.ಬಾಬು ಜಗಜೀವನ ರಾಮ್ ವೃತ್ತಕ್ಕೆ ತಲಾ 50 ಲಕ್ಷ ಹಾಗೂ ಬಸವೇಶ್ವರ ವೃತ್ತದ ಅಭಿವೃದ್ದಿಗೆ 25 ಲಕ್ಷ ರೂ. ನೀಡಿದೆ. ಅದರಂತೆ ಈದ್ಗಾ ಮೈದಾನ ಸೇರಿ ಮೂರು ಕಡೆ ಹೈಮಾಸ್ ವಿದ್ಯುತ್ ದೀಪ ಅಳವಡಿಕೆಗೆ 40 ಲಕ್ಷ ರೂ., ಬುದ್ಧ ಆವರಣ ಅಭಿವೃದ್ದಿಗಾಗಿ 50 ಲಕ್ಷ ರೂ. ಮತ್ತು ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ, ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ನಗರದ ಮುಖ್ಯ ರಸ್ತೆಯ ಡಿವೈಡರ್‌ಗೆ ಗ್ರೀಲ್ ಅಳವಡಿಕೆ ಮಾಡಲು 2.49 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ.

ಎರಡು ಕಡೆ ಕ್ಲಾಕ್ ಟವರ್ ನಿರ್ಮಾಣ

ವಿವಿಧ ಜಿಲ್ಲೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರ ಅಥವಾ ಪಾಲಿಕೆಯಿಂದ ನಗರದ ಐತಿಹಾಸಿಕ ಕುರುವುಗಳು ಗೋಚಾರಿಸುವಂತೆ ಕ್ಲಾಕ್ ಟಾವರ್ ನಿರ್ಮಾಣ ಮಾಡಲಾಗಿರುತ್ತದೆ. ಆದರಿಂದ ಪ್ರಾಧಿಕಾರದಿಂದ ನಗರದ ಐತಿಹಾಸಿಕ ಪ್ರಸಿದ್ದ ಸ್ಥಳವಾದ ತೀನ್‌ಕಂದಿಲ್ ಹಾಗೂ ಆರ್‌ಟಿಓ ಕಚೇರಿ ವೃತ್ತದಲ್ಲಿ ತಲಾ 18 ಲಕ್ಷ ರೂ.ದಂತೆ ಒಟ್ಟು 36 ಲಕ್ಷ ರೂ.ದಲ್ಲಿ ನಿರ್ಮಾಣ ಮಾಡಲಾಗುತ್ತದೆ.

ಯಾವಾಗ ಕಾಮಗಾರಿ ಪ್ರಾರಂಭ

ಇತ್ತಿಚ್ಚಿಗೆ ಪ್ರಾಧಿಕಾರದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ 9 ಕೋಟಿ ರೂ.ವೆಚ್ಚದಲ್ಲಿ ಒಟ್ಟು 20 ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಪ್ರಾರಂಭ ಮಾಡಲು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಈ ಎಲ್ಲ ಕಾಮಗಾರಿಗಳಿಗೆ ಜೂ.21 ರಂದು ಸಿಎಂ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ಮಾಡಲಿದ್ದಾರೆಂದು ಪ್ರಾಧಿಕಾರ ಮಾಹಿತಿ ನೀಡಿದೆ.

ನಗರ ಅಭಿವೃದ್ದಿಗಾಗಿ ಪ್ರಾಧಿಕಾರದ ಅಧಿಕಾರಿಗಳು ಕೆಲಸ ಮಾಡುತ್ತಿದ್ದು, 9 ಕೋಟಿ ರೂ. ವೆಚ್ಚದಲ್ಲಿ ಒಟ್ಟು 20 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಜೂ.21 ರಂದು ಸಿಎಂ ಸಿದ್ದರಾಮಯ್ಯ ಅವರು ಶಂಕು ಸ್ಥಾಪನೆ ಮಾಡಲಿದ್ದಾರೆ. ರಾಜಶೇಖರ ರಾಮಸ್ವಾಮಿ ಅಧ್ಯಕ್ಷ ಆರ್‌ಡಿಎ ರಾಯಚೂರು

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net