

ಜಗದೀಶ ಹೊಂಬಳಿ ಬೆಳಗಾವಿ
ರಾಜ್ಯದ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಇರದ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿರುವ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು ಹಾಗೂ ಪೂರ್ಣಕಾಲಿಕ ಸಂಶೋಧನಾ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿಸಲು ಮುಂದಾಗಿದೆ.
ತನ್ನ ಅನುಕೂಲಕ್ಕೋಸ್ಕರ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತರುವ ಹೆಜ್ಜೆಯನ್ನಿಡುತ್ತಿದೆ. ವಿವಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವಾವಧಿ ಜುಲೈಗೆ ಮುಕ್ತಾಯಗೊಳ್ಳಲಿದೆ. ಇವರ ಸೇವೆ ಮುಂದುವರಿಸುವ ವಿಷಯ ಮರೆಮಾಚುತ್ತಿದ್ದು, ವಿಶ್ವವಿದ್ಯಾಲಯದಲ್ಲಿ ಪೂರ್ಣಾವಧಿ ಸಂಶೋಧನೆಯಲ್ಲಿ ತೊಡಗಿರುವ ಸಂಶೋಧನಾ ವಿದ್ಯಾರ್ಥಿಗಳನ್ನು ವಿವಿಧ ಕಾಲೇಜು ಹಾಗೂ ಪಿ.ಜಿ. ಸೆಂಟರ್‌ಗಳಲ್ಲಿ ಬೋಧನೆ ಮಾಡಬೇಕೆಂದು ಅವರ ಮೇಲೆ ಒತ್ತಡ ಹಾಕುತ್ತಿದೆ.
ಜೂ.14ರವರೆಗೂ ವಿವಿಧ ವಿಷಯಗಳಲ್ಲಿ ಬೋಧನೆ ಮಾಡುವುದಕ್ಕೆ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂದರ್ಶನ ಏರ್ಪಡಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಗೌರವಧನದಲ್ಲೇ ದುಡಿಸಿಕೊಳ್ಳಬೇಕೆನ್ನುವ ಹುನ್ನಾರ ನಡೆಸಿದೆ. ಇತ್ತ ಅತಿಥಿ ಉಪನ್ಯಾಸಕರಾಗಿ ವಿಶ್ವವಿದ್ಯಾಲಯ ಹಾಗೂ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ನೌಕರಿಗೆ ಕುತ್ತು ಬಂದೊದಗಿದೆ. ಮುಂದಿನ ವರ್ಷ ಸೇವೆ ಮುಂದುವರಿಸುತ್ತಾರೆಯೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ.
ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 90 ಪೂರ್ಣಕಾಲಿಕ ಅತಿಥಿ ಉಪನ್ಯಾಸಕರಿದ್ದಾರೆ. ಬೆಳಗಾವಿ ವಿವಿ ಕ್ಯಾಂಪಸ್‌ನಲ್ಲಿ 18, ಸಂಗೊಳ್ಳಿ ರಾಯಣ್ಣ ಕಾಲೇಜಿನಲ್ಲಿ 63, ವಿಜಯಪುರ ಕ್ಯಾಂಪಸ್‌ನಲ್ಲಿ 9 ಜನ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು, ಇವರ ನೌಕರಿಗೆ ಕುತ್ತು ಬಂದೊದಗಿದೆ.
ಜೂನ್ 12ರಂದು ವಿಜ್ಞಾನ ನಿಖಾಯದ ರಸಾಯನಶಾಸ್ತ್ರ, ಬೌತಶಾಸ್ತ್ರ, ಗಣಕವಿಜ್ಞಾನ, ಅಪರಾಧಶಾಸ್ತ್ರ, ಅಪರಾಧಿಕ ನ್ಯಾಯ, ವಿಜ್ಞಾನ, ಗಣಿತಶಾಸ್ತ್ರ, ಸಸ್ಯಶಾಸ್ತ್ರ, ಭೂಗೋಳಶಾಸ್ತ್ರ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದ ಸಂಶೋಧನಾ ವಿದ್ಯಾರ್ಥಿಗಳ ಸಂದರ್ಶನ ನಡೆಸಲಾಗಿದೆ. ಜೂನ್ 13ರಂದು ಕಲಾ ನಿಖಾಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ, ಇಂಗ್ಲಿಷ್, ಮರಾಠಿ, ಇತಿಹಾಸ, ಅರ್ಥಶಾಶ್ತ್ರ, ರಾಜ್ಯಶಾಸ್ತ್ರ, ಸಮಾಜಕಾರ್ಯ ವಿಷಯದ ಸಂಶೋಧನಾ ವಿದ್ಯಾರ್ಥಿಗಳ ಸಂದರ್ಶನ ಏರ್ಪಡಿಸಲಾಗಿದೆ. ಜೂ.14ರಂದು ವಾಣಿಜ್ಯ, ಶಿಕ್ಷಣಶಾಸ್ತ್ರ ನಿಖಾಯದ ವಾಣಿಜ್ಯಶಾಸ್ತ್ರ, ಎಂಬಿಎ, ಶಿಕ್ಷಣಶಾಸ್ತ್ರ ವಿಷಯದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂದರ್ಶನ ಏರ್ಪಡಿಸಲಾಗಿದೆ.
ರಾಣಿಚನ್ನಮ್ಮ ವಿವಿ ಹಮ್ಮಿಕೊಂಡಿರುವ ಕಾರ್ಯಕ್ರಮ ಹಾಗೂ ವಿವಿಧ ಕಾರ್ಯಾಗಾರಗಳಿಗೆ ಅನಿವಾರ್ಯ ಕಾರಣಗಳಿಂದ ಗೈರಾದ ಸಂಶೋಧನಾ ವಿದ್ಯಾರ್ಥಿಗಳಿಗೆ ದಂಡ ವಿಧಿಸಿದೆ. ನಾಲ್ಕು ಬಾರಿ ಗೈರಾದವರಿಗೆ 10 ಸಾವಿರ ರೂ., ಮೂರು ಬಾರಿ ಗೈರಾದವರಿಗೆ 7500 ರೂ., ಎರಡು ಬಾರಿ ಗೈರಾದವರಿಗೆ 5 ಸಾವಿರ ರೂ., ಒಂದು ಬಾರಿ ಗೈರಾದವರಿಗೆ 2500 ರೂ. ದಂಡ ವಿಧಿಸಿದೆ. ಮುಂದಿನ ದಿನಗಳಲ್ಲಿ ಗೈರಾದರೆ ಪಿಎಚ್.ಡಿ ನೋಂದಣಿ ರದ್ದುಪಡಿಸುವ ಎಚ್ಚರಿಕೆ ನೀಡಿದೆ ಎಂದು ಸಂಶೋಧನಾ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಪೂರ್ಣಕಾಲಿಕ ಸಂಶೋಧನಾ ವಿದ್ಯಾರ್ಥಿಗಳನ್ನು ಬೋಧನೆಗೆ ಬಳಸಿಕೊಳ್ಳುತ್ತಿಲ್ಲ. ವಿವಿಯಲ್ಲಿನ 120 ಪೂರ್ಣಕಾಲಿಕ ಸಂಶೋಧನಾ ವಿದ್ಯಾರ್ಥಿಗಳು ಯುಜಿಸಿ ಫೆಲೋಶಿಪ್, ವಿವಿಯ ಫೆಲೋಶಿಪ್, ಜೆಆರ್‌ಎಫ್ ಫೆಲೋಶಿಪ್ ಪಡೆಯುತ್ತಿದ್ದು, ಇವರು ವಾರಕ್ಕೆ ಆರು ಗಂಟೆ ಪಾಠ ಮಾಡಬೇಕೆಂಬ ಮಾನದಂಡವಿದೆ. ನಾವು ಹೊಸದಾಗಿ ಏನು ಮಾಡುತ್ತಿಲ್ಲ. ಸಹಾಯಕ ಪ್ರ್ರಾಧ್ಯಾಪಕರಾಗಬೇಕಾದವರಲ್ಲಿ ಕೌಶಲ ಪರಿಶೀಲಿಸುತ್ತಿದ್ದೇವೆ. ಧಾರವಾಡದಲ್ಲಿರುವ ಹೈಯರ್ ಎಜುಕೇಷನ್ ಅಕಾಡೆಮಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತೇವೆ. ವಿದ್ಯಾರ್ಥಿಗಳ ಸಂಖ್ಯೆ, ವಿವಿ ಕಾರ್ಯಭಾರದ ಆಧಾರದ ಮೇಲೆ ಮುಂದಿನ ವರ್ಷ ಎಷ್ಟು ಜನ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬೇಕೆನ್ನುವ ಬಗ್ಗೆ ನಿರ್ಧಾರವಾಗುತ್ತದೆ. ಯಾರಿಗೂ ತೊಂದರೆ ಕೊಡುತ್ತಿಲ್ಲ. ತ್ಯಾಗರಾಜ, ರಾಣಿ ಚನ್ನಮ್ಮ ವಿವಿ ಕುಲಪತಿ