

ಕುಣಿಗಲ್: ನಾನೇ 50 ಲಕ್ಷ ಕೊಡ್ತೀನಿ. ನನ್ನ ಮಗ ರ್ಬತಾನಾ... ಅವನು ಅಪ್ಪ ಅಂತ ಜಸ್ಟ್ ಕೂಗಲಿ ಸಾಕು... ಸರ್ಕಾರ ನನ್ನ ಮಗನನ್ನು ತಂದು ಕೊಡುತ್ತಾ.. ಹೀಗೆಂದು ಆರ್ ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಗನ ಶವದ ಮುಂದೆ ದೇವರಾಜು ರೋಧಿಸುತ್ತಿದ್ದ ಪರಿ! ಈ ದೃಶ್ಯ ಎಂಥವರಲ್ಲು ಕಣ್ಣೀರ ಬರಿಸುತ್ತಿತ್ತು.
ಆಚೆ ಹೋಗಿ ಮನೆಗೆ ಬರುತ್ತೀನಿ ಅಂತಾ ಹೇಳಿದ್ದ ಮಗೆ ಕೊನೆಗೆ ಬಂದದ್ದು ಶವವಾಗಿ. ಇದ್ದೋವ್ನ ಒಬ್ಬ ಮಗ. ಇನ್ಯಾರನ್ನ ಮನೋಜ್ ಅಂತ ಕರೆಯಲಿ ಎನ್ನುತ್ತಾ ಅತ್ತು ಅತ್ತು ನಿತ್ರಾಣರಾಗಿದ್ದ ತಾಯಿ ಗೌರಮ್ಮರನ್ನು ಸಮಾಧಾನ ಪಡಿಸಲು ಯಾರಿಂದಲು ಆಗಲಿಲ್ಲ.
ಬುಧವಾರ ಸಂಜೆ ಆರ್ಸಿಬಿ ವಿಜಯೋತ್ಸವ ಸಂಭ್ರಮ ಕಣ್ತುಂಬಿಕೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ತೆರಳಿ ಕಾಲ್ತುಳಿದಲ್ಲಿ ಸಾವನ್ನಪ್ಪಿದ 19 ವರ್ಷದ ಮನೋಜ್ ಮೃತ ದೇಹದೊಂದಿಗೆ ಹುಟ್ಟೂರು ತಾಲೂಕಿನ ನಾಗಸಂದ್ರ ಗ್ರಾಮಕ್ಕೆ ಕರೆತಂದಾಗ ಸಂಬಂಧಿಕರ, ನೆರೆಹೊರೆಯವರ ದು:ಖ ಹೇಳತೀರದು.
ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹುಟ್ಟೂರು ಬಿಟ್ಟು ಬೆಂಗಳೂರಿನ ನ್ಯೂ ಯಲಹಂಕ ಟೌನ್ನಲ್ಲಿ ನೆಲೆಸಿದ್ದ ದೇವರಾಜು, ಸಂಸಾರ ನಿರ್ವಹಣೆಗೆ ಪಾನೀಪೂರಿ ವ್ಯಾಪಾರ ಮಾಡುತ್ತಾ ಕಷ್ಟಪಟ್ಟು ದುಡಿದು ಮಕ್ಕಳ ಓದಿಗೆ ಅಷ್ಟೋಇಷ್ಟೋ ಉಳಿಸುತ್ತಿದ್ದರು. ಮನೋಜ್ ಸಹ ಅಪ್ಪ-ಅಮ್ಮನ ಕಷ್ಟ ಕಂಡು ಉತ್ತಮವಾಗಿ ಓದುತ್ತಿದ್ದ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಹೊಂದಿದ್ದ. ಇತ್ತೀಚೆಗೆ ದೊಡ್ಡ ಕನಸನ್ನು ಇಟ್ಟುಕೊಂಡು ಬಿಬಿಎ ಸೇರಿದ್ದ ಮನೋಜ್ 3ನೇ ಸೆಮಿಸ್ಟರ್ಗೆ ದಾಖಲಾಗಬೇಕಿತ್ತು. ಮಗಳು 9ನೇ ತರಗತಿ ಓದುತ್ತಿದ್ದ ಅಣ್ಣನಂತೆ ಆಕೆ ಕೂಡ ಓದಿನಲ್ಲಿ ಚುರುಕಾಗಿದ್ದಾಳೆ.
ಈ ಪುಟ್ಟ ಕುಟುಂಬಕ್ಕೆ ಆರ್ಸಿಬಿ ಗೆಲುವು ದೊಡ್ಡ ಆಘಾತವಾಗಿ ಪರಿಣಮಿಸಿದೆ. ತನ್ನ ನೆಚ್ಚಿನ ಆರ್ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಲು ಚಿನ್ನಸ್ವಾಮಿ ಸ್ಟೇಢಿಯಂ ಬಳಿ ಸ್ನೇಹಿತರೊಂದಿಗೆ ತೆರಳಿದ್ದ ಮನೋಜ್ ದುರಂತ ಅಂತ್ಯ ಕಂಡಿದ್ದು ಅಪ್ಪ-ಅಮ್ಮನ ಕನಸನ್ನು ನುಚ್ಚುನೂರು ಮಾಡಿ ಬಾರದ ಲೋಕಕ್ಕೆ ಪಯಣ ಬೆಳೆಸಿ ಬಿಟ್ಟಿದ್ದಾನೆ. ಗುರುವಾರ ಹುಟ್ಟೂರು ನಾಗಸಂದ್ರದಲ್ಲಿ ಮನೋಜ್ ಅಂತ್ಯಕ್ರಿಯೆ ನೆರವೇರಿತು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ನನ್ನ ಮಗನ ಸಾವಿಗೆ ಸರ್ಕಾರವೇ ನೇರ ಹೊಣೆ. ಮುನ್ನೆಚ್ಚರಿಕೆ ಕ್ರಮ ತಗೋಬೇಕಿತ್ತು. 15 ದಿನ ಬಿಟ್ಟು ವಿಜಯೋತ್ಸವ ಆಚರಣೆ ಮಾಡಬೇಕಿತ್ತು. ಅವರ ಮನೆಯವರಿಗೆ ಯಾರಿಗಾದರು ಈ ರೀತಿ ಆಗಿದ್ದರೆ ಹಿಂಗೆ ಹೇಳ್ತಾ ಇದ್ದರಾ. ನಮ್ಮ ಲೈಫ್ ಇಷ್ಟೇ. ಇನ್ಯಾರಿಗೆ ದುಡಿಯಬೇಕು ನಾವು. ಪರಿಹಾರ ತಗೊಂಡು ಏನ್ ಮಾಡಲಿ, ನನ್ನ ಮಗ ಎದ್ದು ಬರ್ತಾನಾ. ದೇವರಾಜು ಮೃತ ಮನೋಜ್ ತಂದೆ