

ಬೆಂಗಳೂರು: ಬ್ಯಾಂಕ್ಗಳಲ್ಲಿ ಗ್ರಾಹಕರಿಗೆ ಡಿಮಾಂಡ್ ಡ್ರಾಫ್ಟ್ (ಡಿಡಿ) ಮತ್ತಿತರರ ಸೇವೆ ನೀಡುವ ಬಗ್ಗೆ ದೇಶದ ಎಲ್ಲ ಶೆಡ್ಯೂಲ್ ಹಾಗೂ ವಾಣಿಜ್ಯ ಬ್ಯಾಂಕ್ಗಳಿಗೆ ಅನ್ವಯವಾಗುವಂತೆ 2015ರಲ್ಲಿ ‘ಮಾಸ್ಟರ್ ಸರ್ಕ್ಯೂಲರ್’ ಹೊರಡಿಸಲಾಗಿದೆ ಎಂದು ಆರ್ಬಿಐ ಶುಕ್ರವಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಅಲ್ಪ ಮೊತ್ತದ ಡಿಡಿ ನೀಡಲು ನಗದು ಸ್ವೀಕರಿಸದ ಬ್ಯಾಂಕ್ಗಳ ವಿರುದ್ಧ ಕ್ರಮ ಜರುಗಿಸಲು ಕೋರಿ ವಕೀಲ ಎಲ್. ರಮೇಶ್ ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಆರ್ಬಿಐ ಪರ ವಕೀಲರು ಮೆಮೊ ಸಲ್ಲಿಸಿ, ಅರ್ಜಿದಾರರ ಮನವಿ ಸೇರಿ ಬ್ಯಾಂಕಿನಲ್ಲಿ ಸಿಗಬಹುದಾದ ಹಾಗೂ ಒದಗಿಸಬಹುದಾದ ಸೇವೆಗಳ ಬಗ್ಗೆ ಆರ್ಬಿಐ 2015ರ ಜು.1ರಂದು ಮಾಸ್ಟರ್ ಸರ್ಕ್ಯೂಲರ್ ಹೊರಡಿಸಿದೆ. ಆ ಬಗ್ಗೆ ಕಾಲ ಕಾಲಕ್ಕೆ ಪುನರ್ ಮನನ ಮಾಡಿಕೊಡಲಾಗುತ್ತಿದೆ.
ಒಂದೊಮ್ಮೆ ಮಾಸ್ಟರ್ ಸರ್ಕ್ಯೂಲರ್ನಲ್ಲಿ ಉಲ್ಲೇಖಿಸಿರುವ ಸೇವೆ ಒದಗಿಸಲು ನಿರಾಕರಿಸಿದರೆ ದೂರು ನೀಡಲು ಓಂಬುಡನ್ಸ್ಮನ್ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಡಿಡಿ ಸೇವೆ ಕುರಿತು ಮಾಸ್ಟರ್ ಸರ್ಕ್ಯೂಲರ್ನಲ್ಲಿ ಸ್ಪಷ್ಟನೆ ನೀಡಿರುವ ಕಾರಣ ಆ ಸಂಬಂಧ ನಿರ್ದೇಶನ ನೀಡುವ ಅಗತ್ಯ ಉದ್ಭವಿಸುವುದಿಲ್ಲ. ಅರ್ಜಿಯಲ್ಲಿ ಯಾವುದೇ ಬ್ಯಾಂಕ್ ಅನ್ನು ಪ್ರತಿವಾದಿ ಮಾಡಿಲ್ಲ.
ಇದರಿಂದ ಅಲ್ಪ ಮೊತ್ತದ ಡಿಡಿ ವಿತರಿಸಲು ಚೆಕ್ ನೀಡುವಂತೆ ಅಥವಾ ಅದೇ ಶಾಖೆಯಲ್ಲಿ ಬ್ಯಾಂಕ್ ಖಾತೆ ಹೊಂದಿರಬೇಕೆಂದು ಬೇಡಿಕೆ ಇಡುವ ಬ್ಯಾಂಕಿನ ವಿರುದ್ಧ ಕ್ರಮ ಜರುಗಿಸಬೇಕೆಂಬ ಅರ್ಜಿದಾರರ ಮನವಿ ಕುರಿತು ಯಾವುದೇ ನಿರ್ದೇಶನ ನೀಡಲಾಗದು. ಆದರೆ, ನಿರ್ದಿಷ್ಟ ಬ್ಯಾಂಕಿನ ವಿರುದ್ಧ ಯಾವುದಾದರೂ ದೂರು ಇದ್ದರೆ, ಅದರ ಸೀಮಿತವಾಗಿ ಪರಿಹಾರ ಪಡೆಯುವ ಅವಕಾಶವನ್ನು ಅರ್ಜಿದಾರಿಗೆ ಮುಕ್ತವಾಗಿ ಇಡಲಾಗಿದೆ ಎಂದು ತಿಳಿಸಿ ಅರ್ಜಿ ಇತ್ಯರ್ಥಪಡಿಸಿತು.