

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾದ 50:50ರ ಅನುಪಾತ, ಬದಲಿ ನಿವೇಶನ ಹಂಚಿಕೆ ಹಗರಣದ ಬಳಿಕ ಯಾವುದೇ ಸಭೆಗಳು ನಡೆಯುತ್ತಿಲ್ಲ. ಇದರಿಂದ ಬಿಲ್ಡರ್ಸ್‌ಗಳಿಗೆ ತೊಂದರೆಯಾಗಿದೆ. ಹೀಗಾಗಿ ಮುಡಾ ಕೂಡಲೇ ತನ್ನ ಎಂದಿನ ಸಭೆ ನಡೆಸುವ ಮೂಲಕ ಡೆವಲಪರ್ಸ್ ಬಡಾವಣೆಗಳಿಗೆ ಕ್ಲಿಯರೆನ್ಸ್ ನೀಡಬೇಕು ಎಂದು ಕ್ರೆಡೈ ಮೈಸೂರು ಶಾಖೆ ಅಧ್ಯಕ್ಷ ಡಿ.ಶ್ರೀಹರಿ ಮನವಿ ಮಾಡಿದರು.
ರಾಜಧಾನಿ ಬೆಂಗಳೂರು ಹೊರತದಾಗಿ ವೇಗವಾಗಿ ಬೆಳೆಯುತ್ತಿರುವ ಖ್ಯಾತಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಇದೆ. ಪ್ರವಾಸೋದ್ಯಮ ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕಾ ಉದ್ಯಮಿಗಳ ಆದ್ಯತೆಯ ನಗರವಾಗಿದೆ. ಇಲ್ಲಿಯೇ ನೆಲೆಸಬೇಕು ಎನ್ನುವುದು ಅನೇಕರ ಆಸೆಯಾಗಿದೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ನಿವೇಶನ ಪಡೆಯಲು ಅನೇಕರು ಮುಂದಾಗಿದ್ದಾರೆ. ಆದರೆ, ಮುಡಾದಲ್ಲಿ ಯಾವುದೇ ಸಭೆಗಳು ನಡೆಯದೆ 700 ರಿಂದ 750 ಕಡತಗಳಿಗೆ ಧೂಳು ಹಿಡಿಯುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಇದರಿಂದ ಡೆವಲಪರ್ಸ್‌ಗಳು ಈಗಾಗಲೇ ಪೂರ್ಣಗೊಳಿಸಿರುವ ಯೋಜನೆಗಳನ್ನು ಸಾರ್ವಜನಿಕರಿಗೆ ನೀಡಲು ಆಗುತ್ತಿಲ್ಲ. ಜತೆಗೆ ಹೊಸ ಹೊಸ ಯೋಜನೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಮೈಸೂರಿನಲ್ಲಿ ನಿವೇಶನ ಪಡೆಯಬೇಕು ಎನ್ನುವ ಸಾರ್ವಜನಿಕರ ಆಸೆಯೂ ಪೂರ್ಣವಾಗುತ್ತಿಲ್ಲ. ಇದರಿಂದ ಡೆವಲಪರ್ಸ್‌ಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಡೆವಲಪರ್ಸ್‌ಗಳಿಗೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಅಲ್ಲದೆ ಸರ್ಕಾರಕ್ಕೂ ಕೋಟ್ಯಂತರ ರೂ. ನಷ್ಟವಾಗುತ್ತಿದೆ ಎಂದರು.
ಬೃಹದಾಕಾರವಾಗಿ ಬೆಳೆಯುತ್ತಿರುವ ಮೈಸೂರು ರಿಯಲ್ ಎಸ್ಟೇಟ್ ಕಳೆದ ಎರಡು ದಶಕಗಳಲ್ಲಿ ವಾರ್ಷಿಕ ಶೇ.15 ರಿಂದ 20ರಷ್ಟು ಅಭಿವೃದ್ಧಿ ಕಂಡಿದೆ. ಇದೇ ವೇಳೆ ಈಚೆಗೆ ಮುಡಾದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆ ಹಂತದಲ್ಲಿರುವ ನಿವೇಶನಗಳನ್ನು ಹೊರತುಪಡಿಸಿ, ಪ್ರಾಧಿಕಾರ ಅಥವಾ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಅಭಿವೃದ್ಧಿಪಡಿಸಿರುವ ಖಾಸಗಿ ಬಡಾವಣೆಗಳಲ್ಲಿ ಯಾವುದೇ ನ್ಯೂನತೆ ಇಲ್ಲದ ಕಾರಣ ಇವುಗಳಿಗೆ ಮುಡಾ ಸಭೆ ನಡೆಸಿ ಕ್ಲಿಯರೆನ್ಸ್ ನೀಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಮುಡಾ ಹಗರಣ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ನಡೆಯದ ಕಾರಣ ಡೆವಲಪರ್ಸ್‌ಗಳು ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ಮುಡಾ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಎಂದು ಕೋರಿದರು.
ಮೈಸೂರು ಸರ್ವಾಂಗೀಣ ಅಭಿವೃದ್ಧಿ ಗಮನದಲ್ಲಿರಿಸಿಕೊಂಡು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ನಗರದಲ್ಲಿ ವಸತಿ, ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಹೂಡಿಕೆದಾರರನ್ನು ಅರ್ಪಿಸಲು ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಂಸ್ಥೆಯ ಪದಾಧಿಕಾರಿಗಳಾದ ಕೆ.ಎನ್.ರವಿಶಂಕರ್, ಮುರಳೀಧರ್, ಹರೀಶ್ ಶೆಣೈ, ಮಧು ಇದ್ದರು.