

ಮಂಡ್ಯ: ಹೊನಗಾನಹಳ್ಳಿ ಗ್ರಾಮದ ಸ.ನಂ.63 ರಲ್ಲಿ 2.17 ಎಕರೆ ಸರ್ಕಾರಿ ಗೋಮಾಳವನ್ನು ಅಕ್ರಮ ಒತ್ತುವರಿಯಿಂದ ತೆರವು ಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ನಗರದದಲ್ಲಿ ಪ್ರತಿಭಟನೆ ನಡೆಸಿದರು.
ತಹಸೀಲ್ದಾರ್ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯೇ ಉಪವಿಭಾಗಾಧಿಕಾರಿ ಶಿವಮೂರ್ತಿ ಮತ್ತು ತಹಸೀಲ್ದಾರ್ ಶಿವಕುಮಾರ್ ಬಿರಾದರ ಅವರಿಗೆ ಮನವಿ ನೀಡಲಾಯಿತು.
ತಾಲೂಕಿನ ದುದ್ದ ಹೋಬಳಿ ಹುಳ್ಳೇನಹಳ್ಳಿ ಗ್ರಾಮದ ಭೂ ಸ್ವಾಧೀನವಾಗಿರುವ ಸರ್ವೆ ನಂ.191ರ ಎರಡು ಎಕರೆ ಭೂಮಿಯ ಆರ್‌ಟಿಸಿಯಲ್ಲಿ ಭೂ ಮಾಲೀಕರ ಹೆಸರನ್ನು ರದ್ದು ಮಾಡಬೇಕು. ರೈತರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷಿೃಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಸಾರ್ವಜನಿಕ, ಕಂದಾಯ ಇಲಾಖೆ ದಾಖಲಾತಿಗಳನ್ನು ಸಂರಕ್ಷಣೆ ಮಾಡದೆ ಕಡತ ಲಭ್ಯವಿಲ್ಲವೆಂಬ ಹಿಂಬರಹ ನೀಡುತ್ತಿರವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ಸ್ಮಶಾನಗಳನ್ನು ಅಭಿವೃದ್ಧಿಪಡಿಸದೆ ರಸ್ತೆ ಸಂಪರ್ಕ ನೀಡದೆ ಸುಳ್ಳು ವರದಿ ನೀಡಲಾಗಿದೆ. ತಾಲೂಕು ಕಚೇರಿ, ಉಪವಿಭಾಗಾಧಿಕಾರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕ, ಆಹಾರ ಶಾಖೆ, ಪಿಂಚಣಿ ಶಾಖೆ ಭ್ರಷ್ಟ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದ ಮೇಲಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಆಕ್ರೋಶ: ಮನವಿ ಸ್ವೀಕರಿಸಲು ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ಶಿವಮೂರ್ತಿ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ರೈತರ ಸಮಸ್ಯೆಗಳನ್ನು ಈಡೇರಿಸುವುದಿಲ್ಲ. ಸೈನಿಕರಿಗೆ ಭೂಮಿಯನ್ನು ನೀಡುವುದಿಲ್ಲ. ಎಲ್ಲಿಯೋ ಹೊರಗಡೆ ಕುಳಿತಿರುವ ಪ್ರಭಾವಿಗಳಿಗೆ ಬೆಟ್ಟದ ಭಾಗಗಳಲ್ಲಿ ಸೇರಿದಂತೆ ಮೇಲುಕೋಟೆ ವ್ಯಾಪ್ತಿಯಲ್ಲಿ ರಾತ್ರೋರಾತ್ರಿ ಜಮೀನು ನೀಡುತ್ತೀರಾ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಲಿಂಗಪ್ಪಾಜಿ, ಅರಕೆರೆ ಪ್ರಸನ್ನ, ಶಂಕರ್ ಶಿವಳ್ಳಿ, ಎಂ.ಎಸ್.ಅಣ್ಣಯ್ಯ, ಬಿ.ಟಿ.ವಿಶ್ವನಾಥ್, ಎಚ್.ಡಿ.ಜಯರಾಂ, ಜಿ.ಎ.ಶಂಕರ್, ಗಾಣದಾಳು ಜಯರಾಂ ಇತರರಿದ್ದರು.