

ಮಂಡ್ಯ: ಪ್ರತಿ ಟನ್ ಕಬ್ಬಿಗೆ 4,500 ರೂ ನೀಡುವುದರ ಜತೆಗೆ ರಂಗರಾಜನ್ ವರದಿ ಪ್ರಕಾರ ಉಪ ಉತ್ಪನ್ನಗಳ ಮೇಲಿನ ಲಾಭಾಂಶದಲ್ಲಿ ಕಬ್ಬು ಬೆಳೆಗಾರರಿಗೆ ಶೇ.70ರಷ್ಟು ಲಾಭಾಂಶವನ್ನು ನೀಡಬೇಕು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟಿಸಿದರು.
ಸರ್‌ಎಂವಿ ಪ್ರತಿಮೆಯಿಂದ ಮೆರವಣಿಗೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಕಬ್ಬಿಗೆ ಶೇ.10.25 ಇಳುವರಿ ಮಾನದಂಡ ಮಾಡಿಕೊಂಡು ಅವೈಜ್ಞಾನಿಕವಾಗಿ ಟನ್‌ಗೆ 3,150 ರೂ. ನಿಗದಿ ಮಾಡಿದೆ. ಈ ಅನ್ಯಾಯದ ಬೆಲೆ ನೀತಿಯ ಕಾರಣದಿಂದ ಕಬ್ಬು ಬೆಳೆಯುವುದನ್ನೇ ಕೈಬಿಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಎಫ್‌ಆರ್‌ಪಿ ಬೆಲೆ ನಿಗದಿಗೆ ಶೇ.8.5 ಇಳುವರಿ ಮಾನದಂಡವಾಗಿಟ್ಟುಕೊಳ್ಳಬೇಕು. ಕನಿಷ್ಟ ಬೆಂಬಲ ಬೆಲೆಗೆ ಶಾಸನಬದ್ಧ ಕಾನೂನು ರೂಪಿಸಬೇಕು. ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು. ರೈತ ವಿರೋಧಿ ಭೂ ಸುಧಾರಣೆ, ಎಪಿಎಂಸಿ ಹಾಗೂ ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಮಾಡಲು ಹೊರಟಿರುವುದು ಸರಿಯಲ್ಲ. ಇದರಿಂದ ಜಲಾಶಯಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಡಿಸ್ನಿಲ್ಯಾಂಡ್ ಯೋಜನೆ ಕೆಆರ್‌ಎಸ್‌ನಲ್ಲಿ ಮಾತ್ರವಲ್ಲ, ಯಾವುದೇ ಜಲಾಶಯದ ವ್ಯಾಪ್ತಿಯಲ್ಲೂ ಬೇಡ. ಹಗಲು ವೇಳೆಯೇ ಗುಣಮಟ್ಟದ ತ್ರಿಫೇಸ್ ವಿದ್ಯುತ್ ನೀಡಬೇಕು. ಪಂಪ್‌ಸೆಟ್‌ಗೆ ಆಧಾರ್‌ಕಾರ್ಡ್ ಜೋಡಣೆಯ ಕ್ರಮವನ್ನು ಕೈಬಿಡಬೇಕು. ಮನ್‌ಮುಲ್ ರೈತರಿಂದ ಖರೀದಿಸುವ ಹಾಲಿಗೆ 1.75 ರೂ ಕಡಿತ ಮಾಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಒಕ್ಕೂಟದಲ್ಲಿ ಹಿಂದೆ ನಡೆದಿರುವ 72 ಕೋಟಿ ರೂ ದುರುಪಯೋಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದಂತೆ ವಸೂಲಿ ಮಾಡಬೇಕು. ನೀರು ಹಾಲು ಹಗರಣವನ್ನು ತನಿಖೆಗೆ ವಹಿಸಿದ್ದ ಸಿಒಡಿಯಿಂದ ಯಾವುದೇ ಸತ್ಯಾಂಶ ಹೊರಬೀಳುವ ಸಾಧ್ಯತೆ ಇಲ್ಲದೆ ಇರುವ ಕಾರಣ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ವರ್ಷಪೂರ್ತಿ ಖಾಯಂ ಆಗಿರುವಂತೆ ಭತ್ತ, ರಾಗಿ, ಕೊಬ್ಬರಿ ಖರೀದಿ ಕೇಂದ್ರ ತೆರೆಯಬೇಕು. ಮೂರು ಜಿಲ್ಲೆಗೆ ಸೀಮಿತವಾಗಿರುವ ಭತ್ತಕ್ಕೆ ಪ್ರೋತ್ಸಾಹಧನ ಯೋಜನೆಯನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಬೇಕು. ಸರ್ಕಾರಿ ರೇಷ್ಮೆ ಕೇಂದ್ರದಲ್ಲಿ ಚಾಕಿ ಸಾಕಾಣಿಕೆ ವ್ಯವಸ್ಥೆ ಮುಂದುವರೆಸಬೇಕು. ಒಂದು ಕೆ.ಜಿ ರೇಷ್ಮೆಗೆ ಕನಿಷ್ಟ 50 ರೂ ಪ್ರೋತ್ಸಾಹಧನ ನೀಡಬೇಕು. ಕೆಆರ್‌ಎಸ್ ಹಾಗೂ ಹೇಮಾವತಿ ಅಚ್ಚುಕಟ್ಟು ಪ್ರದೇಶದ ಎಲ್ಲ ನಾಲೆಗಳಿಗೂ ಮುಂದಿನ ಬೆಳೆ ಬೆಳೆಯಲು ಅನುಕೂಲ ಮಾಡುವ ನಿಟ್ಟಿನಲ್ಲಿ ಸಲಹಾ ಸಮಿತಿ ಸಭೆ ಕರೆದು ನೀರು ಹರಿಸುವಂತೆ ಆದೇಶಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಪ್ರಸನ್ನ ಎನ್.ಗೌಡ, ಜಿ.ಎಸ್. ಲಿಂಗಪ್ಪಾಜಿ, ವಿಜಯಕುಮಾರ್, ತಗ್ಗಹಳ್ಳಿ ಪ್ರಸನ್ನ, ಕೋಣನಹಳ್ಳಿ ಮಂಜು, ಬೊಮ್ಮೇಗೌಡ, ಲತಾ ಶಂಕರ್, ಬಾಲಕೃಷ್ಣ, ದೇವರಾಜು, ಚಂದ್ರ ಇತರರಿದ್ದರು.