ಒಣಗುತ್ತಿರುವ ಬೆಳೆ ಉಳಿಸಿಕೊಳ್ಳಲು ನೀರು ಹರಿಸಿ: ರೈತ ಸಂಘ(ಮೂಲ ಸಂಘಟನೆ) ಕಾರ್ಯಕರ್ತರ ಪ್ರತಿಭಟನೆ

1 (7)
Published on

ಮಂಡ್ಯ: ಜಿಲ್ಲೆಯಲ್ಲಿ ಬೆಳೆದುನಿಂತಿರುವ ಬೆಳೆಗೆ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ(ಮೂಲ ಸಂಘಟನೆ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸಿಲ್ವರ್‌ಜ್ಯೂಬಿಲಿ ಉದ್ಯಾನದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆ ತೆರಳಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.

ಯಾವುದೇ ಸರ್ಕಾರವಾದರೂ ರೂಪಿಸುವ ರೈತ ಕಾಯ್ದೆ ಬಂಡವಾಳ ಶಾಹಿಗಳ ಪರವಾಗಿಯೇ ಇದ್ದು, ರೈತರ ಬದುಕಿಗೆ ಮಾರಕವಾಗುತ್ತಿವೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೆ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಕೃಷಿ ವೆಚ್ಚ ದಿನೇದಿನೇ ಹೆಚ್ಚಾಗುತ್ತಿದೆ. ಕೆಎಂಎಫ್ ರೈತರಿಂದ ಖರೀದಿಸುವ ಹಾಲಿನ ಬೆಲೆಯನ್ನು ಕಡಿಮೆಗೊಳಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿ ಟನ್ ಕಬ್ಬಿಗೆ 4,500 ರೂ ಜತೆಗೆ ಭತ್ತ, ರಾಗಿ, ಜೋಳಕ್ಕೂ ವೈಜ್ಞಾನಿಕ ಬೆಂಬಲ ಬೆಲೆ ಕೊಡಬೇಕು. ಅಚ್ಚುಕಟ್ಟು ಪ್ರದೇಶದ ಕೆರೆಗಳ ಹೂಳು ತೆಗೆಸಿ ಕೆರೆಗಳಿಗೆ ನೀರು ತುಂಬಿಸಬೇಕು. ಮುಂಗಾರು ವೈಫಲ್ಯತೆ ಕಂಡಿರುವುದರಿಅದ ರೈತರ ಸಂಕಷ್ಟ ತಡೆಯಲು ಪ್ರತಿ ಎಕರೆಗೆ 10 ಸಾವಿರ ರೂ. ಪರಿಹಾರ ನೀಡಬೇಕು. ಕೃಷಿ ಕಾರ್ಮಿಕರಿಗೆ ಜೀವನೋಪಾಯ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರತಿ ಲೀಟರ್ ಹಾಲಿಗೆ 40 ರೂ ನಿಗದಿಪಡಿಸಬೇಕು. ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ರದ್ದುಪಡಿಸಿ, ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಮಾಡಬೇಕು. ರೈತ ಹುತಾತ್ಮರ ದಿನವಾದ ಜು.21ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕು. ಮೈಷುಗರ್‌ನಲ್ಲಿ ಈ ಹಿಂದೆ ನಡೆದಿರುವ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಇ.ಎನ್.ಕೃಷ್ಣೇಗೌಡ ಇಂಗಲಗುಪ್ಪೆ, ರಾಜ್ಯ ಗೌರವಾಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್, ಕೆ.ರಾಮಲಿಂಗೇಗೌಡ, ಎಚ್.ಜೆ.ಪ್ರಭುಲಿಂಗ, ಬೋರಲಿಂಗೇಗೌಡ, ಯು.ಸಿ.ಉಮೇಶ್, ಬೋರೇಗೌಡ, ತಮ್ಮೇಗೌಡ, ಸಿದ್ದಲಿಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net