

ಮಂಡ್ಯ: ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 87ನೇ ಜಯಂತ್ಯುತ್ಸವದ ಅಂಗವಾಗಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘ(ಮೂಲ ಸಂಘಟನೆ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸರ್‌ಎಂವಿ ಪ್ರತಿಮೆ ಎದುರು ಜಮಾಯಿಸಿದ ರೈತರು ಬಳಿಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಸಾಗಿ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ರಸಗೊಬ್ಬರ, ಕೀಟನಾಶಕ ಮುಂತಾದ ವಸ್ತುಗಳ ಬೆಳೆಯನ್ನು ಹೆಚ್ಚಿಸದ ಕಾರಣ ಕೃಷಿ ಉತ್ಪಾದನಾ ವೆಚ್ಚ ಮತ್ತಷ್ಟು ದುಬಾರಿಯಾಯಿತು. ಇದರ ಜತೆಗೆ ಆಹಾರ ಪದಾರ್ಥಗಳಿಗೂ ಜಿಎಸ್‌ಟಿ ತೆರಿಗೆ ವಿಧಿಸಿ ರೈತರ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಎಂಎಸ್‌ಪಿ ಬೆಲೆ ನಿಗದಿಪಡಿಸಲಿಲ್ಲ. ಇದರೊಂದಿಗೆ ಕೃಷಿ ಕ್ಷೇತ್ರವನ್ನು ವಿಮುಖರಾಗುವಂತೆ ಮಾಡಿ ಮುಂದೊಂದು ದಿನ ಕೃಷಿಯನ್ನು ಖಾಸಗಿ ಕಂಪನಿಗೆ ವಹಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಆದ್ದರಿಂದ ಪ್ರತಿ ಟನ್ ಕಬ್ಬಿಗೆ 4500 ರೂ ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ ಬೆಲೆ ನಿಗದಿ ಮಾಡಬೇಕು. ಪ್ರತಿ ಕ್ವಿಂಟಾಲ್ ರಾಗಿಗೆ 5 ಸಾವಿರ ರೂ, ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 18000 ರೂ ನೀಡಬೇಕು. ರೈತ ವಿರೋಧಿ ಮೂರು ಕೃಷಿ ಕಾಯ್ದೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಬೇಕು. ಕೇಂದ್ರ ವಿದ್ಯುತ್ ತಿದ್ದುಪಡಿ ಕಾಯ್ದೆ ಕೈಬಿಡಬೇಕು. ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ವಿದ್ಯುತ್ ಬಾಕಿಯನ್ನು ಬಲವಂತವಾಗಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಬೆಲ್ಲ ಹಾಗೂ ಆಹಾರ ಪದಾರ್ಥಗಳ ಮೇಲೆ ನಿಗದಿಪಡಿಸಿರುವ ಜಿಎಸ್‌ಟಿ ಯನ್ನು ಕೈಬಿಡಬೇಕು. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ದುಬಾರಿ ಬಡ್ಡಿಯನ್ನು ವಿಧಿಸಿ ಒತ್ತೆ ಇಟ್ಟ ಚಿನ್ನಾಭರಣವನ್ನು ಬಿಡಿಸಿಕೊಳ್ಳಲಾಗದ ಸ್ಥಿತಿಗೆ ತಂದೊಡಿದ್ದು, ಈ ಸಂಸ್ಥೆಗಳ ಮೇಲೆ ನಿಯಂತ್ರಣ ವಿಧಿಸಬೇಕು. ಮುಂಬರುವ ಬೇಸಿಗೆ ಅವಧಿಯಲ್ಲಿ ಜಿಲ್ಲೆಯ ಎಲ್ಲ ಕೆರೆ ಕಟ್ಟೆಗಳ ಹೂಳು ತೆಗೆಸಬೇಕು. ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ, ಖಜಾಂಚಿ ಎಚ್.ಜಿ.ಪ್ರಭುಲಿಂಗು, ಉಪಾಧ್ಯಕ್ಷ ಕೆ.ನಾಗೇಂದ್ರಸ್ವಾಮಿ, ರಾಮಲಿಂಗೇಗೌಡ ಇತರರಿದ್ದರು.