500 ಕೋಟಿ ರೂ ಅವ್ಯವಹಾರ: ದಾಖಲೆ ಬಿಡುಗಡೆ ಮಾಡಿದ ರೈತ ಸಂಘ

Raytha
Published on

ಮಂಡ್ಯ: ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಅವರ ಸ್ವಕ್ಷೇತ್ರ ಕೆ.ಆರ್.ಪೇಟೆ ತಾಲೂಕಿನಲ್ಲಿ ಹೇಮಾವತಿ ಎಡದಂಡೆ ಮುಖ್ಯ ನಾಲೆಯ ಆಧುನೀಕರಣದ ಕಾಮಗಾರಿಯಲ್ಲಿ 500 ಕೋಟಿ ರೂಗೂ ಹೆಚ್ಚಿನ ಅವ್ಯವಹಾರ ನಡೆದಿದೆ. ಸಿಎಂ, ಕೆಸಿಎನ್ ಸೇರಿದಂತೆ ಹಲವರಿಗೆ ಮನವಿ ಕೊಟ್ಟರೂ ನಿರ್ಲಕ್ಷೃ ವಹಿಸಲಾಗುತ್ತಿದೆ. ಈ ಸಂಬಂಧ ಸರ್ಕಾರ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು ಎಂದು ರೈತ ಸಂಘ ಎಚ್ಚರಿಕೆ ನೀಡಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ರೈತ ಸಂಘದ ಮಾಜಿ ಅಧ್ಯಕ್ಷರಾದ ಕೆ.ಆರ್.ಜಯರಾಂ ಮತ್ತು ರಾಜೇಗೌಡ ಅವರು, ಮೂರುವರೆ ವರ್ಷದಿಂದ ಈ ಬಗ್ಗೆ ಹೋರಾಟ ಮಾಡಲಾಗುತ್ತಿದೆ. ಇದು ಕದ್ದುಮುಚ್ಚಿ ನಡೆದಿರುವ ಹಗರಣವಲ್ಲ. ಸ್ಥಳಕ್ಕೆ ಹೋದರೂ ಅವ್ಯವಹಾರ ಏನೆಂದು ಕಣ್ಣಿಗೆ ಕಾಣುತ್ತದೆ. ಇದಲ್ಲದೆ ಹಲವರಿಗೆ ಹಾಗೂ ಲೋಕಾಯುಕ್ತ, ಎಸಿಬಿ ಅಧಿಕಾರಿಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿರಾರೂ ಪುಟಗಳ ದಾಖಲೆ ಕಲೆಹಾಕಿ ಕೊಡಲಾಗಿದೆ. ಆದರೂ ತನಿಖೆ ಮಾಡಲು ಏನು ಸಮಸ್ಯೆ. ಬಹುಶಃ ಎಲ್ಲರಿಗೂ ಕಿಕ್‌ಬ್ಯಾಕ್ ಹೋಗಿರಬಹುದು ಎಂದು ಆರೋಪಿಸಿದರು.
ಪ್ರಕರಣದ ಆರೋಪಗಳಿವು: ಮುಖ್ಯ ನಾಲೆಯ ಸರಪಳಿ 72.260 ರಿಂದ 214.300 ಕಿ.ಮೀ.ವರೆಗೆ ನಡೆದಿರುವ 817.73 ಕೋಟಿ ರೂ ಮೊತ್ತದ ಆಧುನೀಕರಣ ಕಾಮಗಾರಿಯ ಗುತ್ತಿಗೆಯನ್ನು ವಿಜಯಪುರ ಮೂಲದ ಎಂ.ವೈ.ಕಟ್ಟಿಮನಿ ಎಂಬಾತನಿಗೆ ವಹಿಸಲಾಗಿದೆ. ಕಾಮಗಾರಿಯನ್ನು 2018ರಲ್ಲಿ ಪ್ರಾರಂಭಿಸಿ 15 ತಿಂಗಳೊಳಗೆ ಪೂರೈಸಬೇಕಾಗಿತ್ತು. ಕಾಮಗಾರಿ ಪೂರ್ಣಗೊಂಡಿಲ್ಲದಿದ್ದರೂ, ಸಾವಿರ ಕೋಟಿ ರೂಗೂ ಅಧಿಕ ಬಿಲ್ ಪಾವತಿಸಿ ಬ್ರಹ್ಮಾಂಡ ಭ್ರಷ್ಟಾಚಾರವೆಸಗಲಾಗಿದೆ ಎಂದು ಆರೋಪಿಸಿದರು.
ಕಾಮಗಾರಿಗೆ ಅಗತ್ಯವಿರುವ 2.4 ಲಕ್ಷ ಕ್ಯೂಬಿಕ್ ಮೀಟರ್ ಮರಳನ್ನು 100 ಕಿ.ಮೀ ದೂರದ ಮೈಸೂರು ಜಿಲ್ಲೆಯ ಟಿ.ನರಸೀಪುರ ಕಾವೇರಿ ನದಿ ಪಾತ್ರದಿಂದ ಖರೀದಿಸಲಾಗಿದೆ ಎಂದು ಬಿಲ್ ಸೃಷ್ಟಿಸಿ 2.85 ಕೋಟಿ ರೂಗೂ ಹೆಚ್ಚು ವ್ಯಯಿಸಲಾಗಿದೆ. ನಿಷೇಧಿತ ಪ್ರದೇಶವಾಗಿರುವ ಕಾವೇರಿ ನದಿ ಪಾತ್ರದಿಂದ ಈ ಪ್ರಮಾಣದ ಮರಳನ್ನು ಎತ್ತುವಳಿ ಮಾಡಿಲ್ಲ ಎಂದು ಮೈಸೂರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಲಿಖಿತ ದಾಖಲೆ ನೀಡಿ ಸ್ಪಷ್ಟಪಡಿಸಿದ್ದಾರೆ. ಕೆ.ಆರ್.ಪೇಟೆ ತಾಲೂಕಿನಲ್ಲಿ ಅಸ್ತಿತ್ವದಲ್ಲೇ ಇಲ್ಲದ ಚೌಡಹಳ್ಳಿ ಎಂಬ ಹೆಸರಿನಲ್ಲಿ ನಕಲಿ ಗ್ರಾಮವನ್ನು ಸೃಷ್ಟಿಸಿಕೊಂಡು ಕಾಮಗಾರಿಗೆ ಬೇಕಾದ ಗ್ರಾವೆಲ್ ಮಣ್ಣನ್ನು ಖರೀದಿಸಲಾಗಿದೆ ಎಂದು 248 ಕೋಟಿ ರೂ ಅವ್ಯವಹಾರ ನಡೆಸಲಾಗಿದೆ. ಇನ್ನು ಆಧುನೀಕರಣ ಯೋಜನೆಯಲ್ಲಿ ಈಗಾಗಲೇ ಬಹುತೇಕ ಕಡೆ ನಾಲೆಯು ಅಲ್ಲಲ್ಲಿ ಕುಸಿದು ಬೀಳುತ್ತಿದ್ದು, ಕಳಪೆ ಕಾಮಗಾರಿ ಇದಕ್ಕೆ ಕಾರಣ. ಈ ಅಕ್ರಮವನ್ನು ಮುಚ್ಚಿಹಾಕಲು ಇಲಾಖೆಯ ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೊಲೆ ಬೆದರಿಗೆ ಹಾಕಿದ್ದರು: ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹೋರಾಟದಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಕೊಲೆ ಬೆದರಿಕೆ ಹಾಕಲಾಗಿದೆ. ಆದರೂ ಹಿಂದೆ ಸರಿದಿಲ್ಲ. ಇನ್ನು ಅವ್ಯವಹಾರ ಕುರಿತಂತೆ ಲೋಕಾಯಕ್ತ ನೇಮಿಸಿದ್ದ ನೀರಾವರಿ ತಾಂತ್ರಿಕ ಸಮಿತಿ ಭೇಟಿ ನೀಡಿದ್ದ ವೇಳೆ ಅವರಿಗೆ ಪಾರದರ್ಶಕವಾಗಿ ವರದಿ ನೀಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲವಾದರು. ಇತ್ತ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹರಿಹಾಯ್ದರು.
ಅವ್ಯವಹಾರ ತನಿಖೆಗೆ ಮುಂದಾಗದಿರುವ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ 6 ದಿನ ಆಹೋರಾತ್ರಿ ಧರಣಿ ನಡೆಸಿದ ಸಂದರ್ಭದಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಜಿಲ್ಲಾಧಿಕಾರಿ ಎಸ್.ಅಶ್ವಥಿ ಭೇಟಿ ನೀಡಿ 15 ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಹುಸಿಯಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ತಾಲೂಕಿಗೆ ಆಗಮಿಸಿದ ವೇಳೆ ಅವರಿಗೂ ಮನವಿ ಸಲ್ಲಿಸಿದ್ದೆವು. ತದನಂತರ ಸಿಎಂ ಭೇಟಿ ಮಾಡಿದಾಗ ವಿಕಾಸ ಸೌಧದಲ್ಲಿ ವಿಚಾರಿಸಿ ಎಂದು ಹೇಳುತ್ತಾರೆ. ಅಲ್ಲಿ ಹೋಗಿ ನೋಡಿದರೆ ಸಂಬಂಧಪಟ್ಟ ಕಡತ ನಾಪತ್ತೆಯಾಗಿದೆ. ಇದೆಲ್ಲವನ್ನು ಗಮನಿಸಿದರೆ ಈ ಅವ್ಯವಹಾರದಲ್ಲಿ ಸಚಿವರು ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಎಲ್ಲ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಪ್ರಸನ್ನ ಎನ್.ಗೌಡ, ಎಸ್.ಸಿ.ಮಧುಚಂದನ್, ನಾಗೇಗೌಡ, ಧನಂಜಯ, ಶ್ರೀಕಾಂತ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net