ಸಮಾನ ಶಿಕ್ಷಣ ಕೊಡಲು ಸರ್ಕಾರ: ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಟೀಕೆ

10_12_Mdy_02(A(Raytha Sanga)
Published on
ಮಂಡ್ಯ: ಸರ್ಕಾರಗಳು ಸಮಾನ ಶಿಕ್ಷಣ ಕೊಡಲು ವಿಫಲವಾಗಿವೆ. ಮಾತ್ರವಲ್ಲದೆ ಜನಪ್ರತಿನಿಧಿಗಳು ಪರವಾನಗಿ ಪಡೆದು ತಮ್ಮ ಬಂಧು ಬಳಗದ ಹೆಸರಿನಲ್ಲಿ ಹಲವಾರು ಖಾಸಗಿ ಶೈಕ್ಷಣಿಕ ಸಂಸ್ಥೆಗಳು ನಡೆಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಟೀಕಿಸಿದರು.
ತಾಲೂಕಿನ ದ್ಯಾಪಸಂದ್ರ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಬೇಕೆಂದು ಪ್ರತಿಯೊಬ್ಬ ಪಾಲಕರ ಆಸೆಯಾಗಿದೆ. ಇದರಿಂದಾಗಿ ಸಾಲ ಮಾಡಿ ಲಕ್ಷಾಂತರ ರೂಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ಕಟ್ಟಿ ಸಾಲಗಾರರಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಒಂದು ಮಗುವನ್ನು ಓದಿಸಲು ಎರಡು ಮೂರು ಎಕರೆಯಲ್ಲಿ ಕಬ್ಬು, ಭತ್ತ, ರಾಗಿ ಬೆಳೆದರು ಓದಿಸಲು ಸಾಧ್ಯವಾಗದೆ ಸಾಲ ಮಾಡಿ ಹೈರಾಣಾಗುತ್ತಿವೆ. ಆದ್ದರಿಂದ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಆಲೋಚಿಸಬೇಕು. ಆದರೆ ವಾಸ್ತವವಾಗಿ ಕೊಡಬೇಕಾದ ಶಿಕ್ಷಣವನ್ನು ಉಳ್ಳವರ ಖಾಸಗಿ ಶಾಲೆಗೆ ಮೀಸಲಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸಮಿತಿ ಸದಸ್ಯ ಪ್ರಸನ್ನ ಎನ್.ಗೌಡ ಮಾತನಾಡಿ, ರೈತ ಸಂಘಕ್ಕೆ ತನ್ನದೇ ಆದ ಇತಿಹಾಸವಿದೆ. 1980ನೇ ಇಸವಿಯಲ್ಲಿ ಹುಟ್ಟಿಕೊಂಡ ಸಂಘಕ್ಕೆ ಹಲವಾರು ಜನ ತಮ್ಮ ತ್ಯಾಗ ಬಲಿದಾನಗಳನ್ನು ನೀಡಿದ್ದಾರೆ. ಯಾವಾಗ ನಮ್ಮನ್ನಾಳುವವರು ರೈತರ ಮೇಲೆ ನಿರಂತರವಾದ ಶೋಷಣೆ, ಬೇಕಾದ ಹಕ್ಕನ್ನು ಕೊಡಲು ಸತಾಯಿಸಿದರೋ, ಅಧಿಕಾರಿ ವರ್ಗವನ್ನು ಬಳಸಿಕೊಂಡು ನಿರಂತರವಾಗಿ ನಮ್ಮ ಮೇಲೆ ದಬ್ಬಾಳಿಕೆಗಳನ್ನು ಮಾಡುತ್ತಿದ್ದರೋ ಆಗ ಹುಟ್ಟಿಕೊಂಡ ರೈತ ಸಂಘ ಇಂದು ರೈತರ ಪಾಲಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತಾ ಬರುತ್ತಿದೆ ಎಂದರು.
ರಾಜ್ಯ ಖಜಾಂಚಿ ಪ್ರಸನ್ನಗೌಡ ತಗ್ಗಳ್ಳಿ, ಜಿಲ್ಲಾ ಖಜಾಂಚಿ ಶೆಟ್ಟಳ್ಳಿ ರವಿಕುಮಾರ್, ಬಸರಾಳು ವೃತ್ತ ಘಟಕದ ಅಧ್ಯಕ್ಷ ಅನಿಲ್ಕುಮಾರ್, ದ್ಯಾಪಸಂದ್ರ ಗ್ರಾಮದ ಮುಖಂಡರಾದ ಉಮೇಶ್, ನಾಗರಾಜು, ನಿಂಗಪ್ಪ, ಮಂಜು, ನಿಂಗರಾಜು, ಶಿವು, ಆನಂದ ಇತರರಿದ್ದರು.
ಇದೇ ಸಂದರ್ಭದಲ್ಲಿ ಸಂಘದ ತತ್ವ ಸಿದ್ಧಾಂತಗಳನ್ನು ಮೆಚ್ಚಿ 150ಕ್ಕೂ ಹೆಚ್ಚು ಯುವಕರು, ರೈತರು, ರೈತ ಮಹಿಳೆಯರು ಹಸಿರು ಶಾಲು ಹಾಕಿಕೊಂಡು ಸೇರ್ಪಡೆಯಾದರು. ಇದಕ್ಕೂ ಮುನ್ನ ಮಧುಚಂದನ್ ಅವರನ್ನು ಎತ್ತಿನಗಾಡಿ ಮೆರವಣಿಗೆಯ ಮೂಲಕ ಕರೆದುಕೊಂಡು ಬರಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net