

ಮಂಡ್ಯ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡದಿದ್ದರೆ ಶ್ರೀಲಂಕಾದಲ್ಲಿ ತಲೆದೋರಿದ ಆಹಾರದ ಬಿಕ್ಕಟ್ಟು ಭಾರತವನ್ನು ಕಾಡುವುದರಲ್ಲಿ ಸಂದೇಹವಿಲ್ಲ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಎಚ್ಚರಿಕೆ ನೀಡಿದರು.
ತಾಲೂಕಿನ ಸಿದ್ದೇಗೌಡನದೊಡ್ಡಿ ಗ್ರಾಮದಲ್ಲಿ ರೈತ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯ ಹಲವು ಯುವಕರು ಜಮೀನುಗಳು ಇದ್ದರೂ ಸಹ ಕೃಷಿಗೆ ಸರಿಯಾದ ಉತ್ತೇಜನವಿಲ್ಲ ಮತ್ತು ಬೆಂಬಲ ಬೆಲೆ ಇಲ್ಲ ಎಂಬ ಕಾರಣಕ್ಕೆ ಪಟ್ಟಣದತ್ತ ವಲಸೆ ಹೋಗುತ್ತಿದ್ದಾರೆ. ಹಿಂದೆ ಜಿಲ್ಲೆಯಲ್ಲಿ ಹಲವು ಕಾರ್ಖಾನೆಗಳಿದ್ದವು. ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಪ್ರತಿಷ್ಠಿತ ಕಾರ್ಖಾನೆಗಳು ಬಾಗಿಲು ಮುಚ್ಚುವಂತಾಯಿತು. ಪರಿಣಾಮ ಯುವಕರು ಕೆಲಸಕ್ಕಾಗಿ ಬೇರೆಡೆ ಹೋಗುವಂತಾಗಿದೆ. ಚುನಾವಣೆ ಸಂದರ್ಭ ಬಂದಾಗ ಮಾತ್ರ ಪ್ರತಿ ಊರಿನಲ್ಲೂ ಗುದ್ದಲಿ ಪೂಜೆ ಮಾಡುವ ರಾಜಕಾರಣಿಗಳಿಗೆ ಪ್ರತಿ ವರ್ಷವೂ ಇದೇ ರೀತಿ ಏಕೆ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಸಂಘದ ರಾಜ್ಯ ಖಜಾಂಚಿ ತಗ್ಗಳ್ಳಿ ಪ್ರಸನ್ನ ಮಾತನಾಡಿ, ಮಗು ಅಳದೇ ಇದ್ದರೇ ಹೆತ್ತ ತಾಯಿಯೂ ಹಾಲು ಕುಡಿಸದ ಕಾಲವಿದು. ಅದೇ ರೀತಿ ನಮ್ಮ ಬೆಳೆಗಳಿಗೆ ಬೇಕಾದ ವೈಜ್ಞಾನಿಕ ಬೆಲೆಯನ್ನು ಕೊಡಲು ಯಾವ ಸರ್ಕಾರಗಳು ಮುಂದೆ ಬರುವುದಿಲ್ಲ. ನಮ್ಮ ಹಕ್ಕುಗಳನ್ನು ನಾವೇ ದೊಡ್ಡ ಮಟ್ಟದ ದನಿಯಾಗಿ ಕೇಳಿ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಶೆಟ್ಟಳ್ಳಿ ರವಿಕುಮಾರ್, ಮುದ್ದುಂಗೆರೆ ಜಗದೀಶ್, ನಿಂಗೇಗೌಡ, ವಿಜಯ್ ಕುಮಾರ್, ರಾಮಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ಸದಸ್ಯರಾದ ಪ್ರಮೀಳಾ, ನಾಗಮ್ಮ, ಸಿ.ತಮ್ಮಣ್ಣ, ವಿಎಸ್‌ಎಸ್‌ಎನ್ ಅಧ್ಯಕ್ಷ ಎಸ್.ಕೆ.ಹರೀಶ್, ಮುಖಂಡರಾದ ಶಿವರಾಮು, ಕೆಂಪರಾಜು ಇತರರಿದ್ದರು.
ಸಿದ್ದೇಗೌಡನದೊಡ್ಡಿ, ಮೋಳೆಕೊಪ್ಪಲು, ಕೋಡಿದೊಡ್ಡಿ, ಅರಸಮ್ಮನದೊಡ್ಡಿ ಗ್ರಾಮಗಳನ್ನು ಸೇರಿದಂತೆ ಘಟಕ ಉದ್ಘಾಟಿಸಲಾಯಿತು. 30ಕ್ಕೂ ಹೆಚ್ಚು ರೈತರು ಹಾಗೂ ಯುವಕರು ಹಸಿರು ಟವಲ್ ಹಾಕಿಕೊಳ್ಳುವುದರ ಮೂಲಕ ರೈತ ಸಂಘಕ್ಕೆ ಸೇರ್ಪಡೆಗೊಂಡರು.