

ಮಂಡ್ಯ: ಇತಿಹಾಸದಲ್ಲಿ ರೈತ ಚಳವಳಿಗಳಿಗೆ ತನ್ನದೇ ಆದ ವಿಶೇಷ ಸ್ಥಾನವಿದೆ ಎಂದು ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಹೇಳಿದರು.
ತಾಲೂಕಿನ ಹುಲಿವಾನ ಗ್ರಾಮದಲ್ಲಿ ಶನಿವಾರ ರೈತ ಸಂಘದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು. ಇಂದು ಸರ್ಕಾರಗಳು ರೈತರನ್ನು ನಿರ್ಲಕ್ಷೃ ಮಾಡುವುದು ಹೆಚ್ಚುತ್ತಿದೆ. ಬೆಳೆಗೆ ಸರಿಯಾದ ಬೆಲೆ ಪಡೆದುಕೊಳ್ಳಲು ಹೋರಾಟ ಮಾಡಬೇಕಾದ ಸ್ಥಿತಿ ಬಂದಿದೆ. ಪ್ರತಿಭಟನೆ ಮಾಡದಿದ್ದರೂ ಸರ್ಕಾರ ನಮ್ಮ ಕಡೆ ಗಮನಹರಿಸುತ್ತಿಲ್ಲ. ಈ ನಡುವೆ ಜಿಲ್ಲೆಯ ಜನರು ಮತ್ತೆ ಚಳವಳಿಗಳನ್ನು ಕಟ್ಟುವಲ್ಲಿ ತಮ್ಮ ಮನಸ್ಸು ಬದಲಾಯಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಚಳವಳಿಗಳು ವ್ಯವಸ್ಥೆಯನ್ನು ಬಡಿದೆಚ್ಚರಿಸುವಷ್ಟು ಶಕ್ತಿ ಶಾಲಿಯಾಗಿವೆ. ಮಂಡ್ಯ ನಗರದಲ್ಲಿ ಮಂಡಿಯುದ್ದ ಗುಂಡಿ ಬಿದ್ದಿದ್ದ ರಸ್ತೆಗಳ ಅವ್ಯವಸ್ಥೆ ಖಂಡಿಸಿ ಬೃಹತ್ ಬೈಕ್ ರ‌್ಯಾಲಿ ನಡೆಸಿ ನಗರಸಭೆ ಹಾಗೂ ಪಿಡಬ್ಲುೃಡಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಲಾಗಿತ್ತು. ಎಚ್ಚೆತ್ತ ಅಧಿಕಾರಿಗಳು ಗುಂಡಿಯನ್ನು ತಾತ್ಕಾಲಿಕವಾಗಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಇದು ಚಳವಳಿಗೆ ಇರುವ ಶಕ್ತಿ ಎಂದು ವಿವರಿಸಿದರು.
ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಒಂದು ಕಾಲದಲ್ಲಿ ಚಳವಳಿಗಳು ಎಂದರೆ ಸರ್ಕಾರ ಮತ್ತು ರಾಜಕೀಯ ನಾಯಕರು ಹೆದರುತ್ತಿದ್ದರು. ಆದರೆ ಇಂದು ನಮ್ಮನಾಳುವ ಸರ್ಕಾರ ಹಾಗೂ ಹಲವು ರಾಜಕೀಯ ನಾಯಕರ ಪಿತೂರಿಗೆ ಸಿಲುಕಿ ರೈತ ಸಂಘ ಒಡೆದು ಹೋಳಾಗುತ್ತಿದ್ದು, ಚಳವಳಿಗಳು ಪ್ರಭಾವ ಕಳೆದುಕೊಳ್ಳುತ್ತಿವೆ. ಪರಿಣಾಮ ಚಳವಳಿಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ನಡುವೆ ಮಧುಚಂದನ್ ನೇತೃತ್ವದಲ್ಲಿ ಹಲವು ಹಳ್ಳಿಗಳಲ್ಲಿ ಗ್ರಾಮ ಘಟಕಗಳು ಉದ್ಘಾಟನೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ರಾಜ್ಯ ಸಮಿತಿ ಸದಸ್ಯರಾದ ಪ್ರಸನ್ನ ಗೌಡ ಮಾತನಾಡಿ, ಚಳವಳಿಗಳ ಹಿನ್ನೆಲೆಯಿಂದ ವಿಧಾನಸಭೆ ಪ್ರವೇಶಿಸಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರು ರೈತರ ಬಗ್ಗೆ ಹಲವು ಬಾರಿ ದನಿ ಎತ್ತಿದ್ದರು. ಅವರು ಕಾಲವಾದ ನಂತರ 10ಕ್ಕೂ ಹೆಚ್ಚು ಅಧಿವೇಶನಗಳು ನಡೆದಿವೆ. ಈವರೆಗೂ ಯಾರೊಬ್ಬರಾದರೂ ರೈತರ ಪರವಾಗಿ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.
ರಾಜ್ಯ ಖಜಾಂಚಿ ತಗ್ಗಳ್ಳಿ ಪ್ರಸನ್ನ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಿಂಗಪ್ಪಾಜಿ, ಖಜಾಂಚಿ ಶೆಟ್ಟಹಳ್ಳಿ ರವಿಕುಮಾರ್, ಮಂಡ್ಯ ತಾಲೂಕು ಅಧ್ಯಕ್ಷ ಶಿವಳ್ಳಿ ಚಂದ್ರು, ಕೆನ್ನಾಳು ವಿಜಯ್‌ಕುಮಾರ್, ಮರಿಚೆನ್ನೇಗೌಡ, ರಾಮಕೃಷ್ಣ ಇತರರಿದ್ದರು.
ಇದೇ ವೇಳೆ 50ಕ್ಕೂ ಹೆಚ್ಚು ಮಹಿಳೆಯರು, ಯುವಕರು ಹಾಗೂ ಹಿರಿಯರು ರೈತ ಸಂಘಕ್ಕೆ ಸೇರಿದರು.