ಕೃಷಿಗೆ ಪೂರಕ ಕಾರ್ಖಾನೆ ಪ್ರಾರಂಭ: ಸರ್ವೋದಯ ಪಕ್ಷದ ಅಭ್ಯರ್ಥಿ ಎಸ್.ಸಿ.ಮಧುಚಂದನ್ ಭರವಸೆ

Raytha Sanga)
Published on

ಮಂಡ್ಯ: ರೈತರ ಅಭಿವೃದ್ಧಿಗೆ ಹೋಬಳಿ ಮಟ್ಟದಲ್ಲಿ ಕೃಷಿ ಪೂರಕ ಕಾರ್ಖಾನೆಗಳನ್ನು ಸ್ಥಾಪನೆ ಮಾಡುವ ಯೋಜನೆ ರೂಪಿಸಲಾಗುವುದು ಎಂದು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್.ಸಿ.ಮಧುಚಂದನ್ ಭರವಸೆ ನೀಡಿದರು.

ನಗರದ ವಿವಿಧೆಡೆ ಮತಯಾಚನೆ ಮಾಡಿದ ಅವರು, ಹಸು ಅಥವಾ ಎತ್ತು ಕೊಂಡುಕೊಳ್ಳಲು ಅದರ ಸುಳಿ, ದೇಹವನ್ನು ಪರೀಕ್ಷಿಸಿ ನಿರ್ಧರಿಸಲಾಗುತ್ತದೆ. ಅಂತೆಯೇ ನಿಮ್ಮೆಲ್ಲರ ಸಮಸ್ಯೆಗೆ ಸ್ಪಂದಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹಲವು ವರ್ಷದಿಂದ ನಿಮ್ಮ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ಒಂದು ಬಾರಿ ನನಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಸರ್ಕಾರಿ ಶಾಲೆಗಳನ್ನು ನಿರ್ಲಕ್ಷಿಸಲಾಗಿದೆ. ಕಾರಣ ಬಹುತೇಕ ರಾಜಕಾರಣಿಗಳು ಖಾಸಗಿ ಶಾಲೆಗಳನ್ನೇ ನಡೆಸುತ್ತಿದ್ದಾರೆ. ರೈತರ ಬೆಳೆಗೆ ನ್ಯಾಯಯುತ ಬೆಲೆ ನೀಡಬೇಕಾದವರೇ ಕಾರ್ಖಾನೆ ಮಾಲೀಕರಾಗಿದ್ದಾರೆ. ಹೀಗಿರುವಾಗ ನ್ಯಾಯ ನಿರೀಕ್ಷಿಸಲು ಸಾಧ್ಯವೇ?. ಮಂಡ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಯೋಜನೆ ಸಿದ್ಧಪಡಿಸಿಕೊಳ್ಳಲಾಗಿದೆ ಎಂದರು.

ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ಮಾತನಾಡಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಹಾಲಿಗೆ, ಕಬ್ಬಿಗೆ ಬೆಲೆ ಕೊಡಿ ಎಂದು ಹೋರಾಟ ಮಾಡಿರುವುದನ್ನು ನಾವು ಕಂಡಿಲ್ಲ. ಮಂಡ್ಯ ಜಿಲ್ಲಾ ಕೇಂದ್ರವನ್ನ ನೋಡುತ್ತಿದ್ದೇವೆ. ಅಭಿವೃದ್ಧಿ ದೃಷ್ಟಿಯಿಂದ ನೋಡಿದರೆ ದೊಡ್ಡ ಹಳ್ಳಿಯಂತಿದೆ. ಚರಂಡಿ ಸೇರಿದಂತೆ ಮೂಲ ಸೌಕರ್ಯವಿಲ್ಲ. ಈವರೆಗೆ ಆಯ್ಕೆಯಾದ ರಾಜಕಾರಣಿಗಳು ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಖಜಾಂಚಿ ತಗ್ಗಹಳ್ಳಿ ಪ್ರಸನ್ನ, ಮುಖಂಡರಾದ ಹಾಲಹಳ್ಳಿ ಮಹೇಶ್, ಶಶಿಧರ್ ಅಜ್ಜಹಳ್ಳಿ, ಚಿಕ್ಕೇಗೌಡನದೊಡ್ಡಿ ಅರುಣ, ಕಾಂತರಾಜು, ತನು, ನಿರಂಜನ್, ಮಹೇಶ್‌ಚಂದ್ರ, ಪಣಕನಹಳ್ಳಿ ಧನಂಜಯ್ ಇತರರಿದ್ದರು. ನಗರದ 35 ವಾರ್ಡ್‌ನಲ್ಲಿಯೂ ಆಟೋಗಳಲ್ಲಿ ಕಾರ್ಯಕರ್ತರೊಂದಿಗೆ ಮತಯಾಚನೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net