

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್.ಸಿ.ಮಧುಚಂದನ್ ಅವರಿಗೆ ಆಟೋ ಗುರುತಿನ ಚಿಹ್ನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹಲವೆಡೆ ಆಟೋ ಚಲಾಯಿಸುವ ಮೂಲಕವೇ ಮತಯಾಚನೆ ಮಾಡಿದರು.
ನಗರದ ಹಲವು ಬಡಾವಣೆ ಸೇರಿದಂತೆ ತಾಲೂಕಿನ ಚಿಕ್ಕಮಂಡ್ಯ, ಕೊಮ್ಮೇರಹಳ್ಳಿ, ಸಾತನೂರು, ಹೊನಗಾನಹಳ್ಳಿ ಗ್ರಾಮಗಳಿಗೆ ಆಟೋದಲ್ಲಿಯೇ ತೆರಳಿದ ಅವರು ಜನರ ಬಳಿ ಮತಯಾಚನೆ ಮಾಡುತ್ತಿದ್ದದ್ದು ಗಮನಸೆಳೆಯಿತು. ಈ ವೇಳೆ ಮಾತನಾಡಿದ ಅವರು, ಮಂಡ್ಯ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದಿದೆ. ಇದರಿಂದಾಗಿಯೇ ದೊಡ್ಡಹಳ್ಳಿ ಎನ್ನುವ ಹಣೆಪಟ್ಟಿ ಕಟ್ಟಲಾಗಿದೆ. ನಮ್ಮಿಂದ ಅಧಿಕಾರದ ಗದ್ದುಗೆ ಏರಿದವರು ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ತರುವಲ್ಲಿ ವಿಫಲರಾಗಿದ್ದಾರೆ. ಭವಿಷ್ಯದ ಆಲೋಚನೆ ಇಲ್ಲದೇ ಅಧಿಕಾರ ಮಾಡಿದರ ಪರಿಣಾಮವನ್ನು ಜನಸಾಮಾನ್ಯರು ಎದುರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯಾವುದೇ ಅಧಿಕಾರ ಇಲ್ಲದಿದ್ದರೂ ಜನಸಾಮಾನ್ಯರು, ರೈತರ ಪರವಾಗಿ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ಕ್ಷೇತ್ರದ ಪ್ರತಿ ಸಮಸ್ಯೆಗಳನ್ನು ಅರಿತಿದ್ದೇನೆ. ಕೃಷಿ ಕಾರ್ಮಿಕನಿಂದ ಹಿಡಿದು ಪದವೀಧರ ಯುವಸಮೂಹ ಅನುಭವಿಸುತ್ತಿರುವ ಬವಣೆ ಏನೆಂಬುದು ತುಂಬಾ ಹತ್ತಿರದಿಂದ ತಿಳಿದುಕೊಂಡಿದ್ದಾರೆ. ಮಂಡ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಮತದಾರರು ಈ ಬಾರಿ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು.