

ಮಂಡ್ಯ: ರೈತರ ಹಲವು ಸಮಸ್ಯೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸುವುದರ ಜತೆಗೆ ಕೆಲವನ್ನು ಸ್ಥಳದಲ್ಲಿಯೇ ಪರಿಹಾರ ನೀಡಿದ ಹಾಗೂ ಇನ್ನುಳಿದ ಬೇಡಿಕೆಗೆ ನಾಲ್ಕು ದಿನ ಸಮಯ ತೆಗೆದುಕೊಂಡಿರುವ ಹಿನ್ನಲೆಯಲ್ಲಿ ಮಾ.12ರಂದು ರೈತ ಸಂಘದಿಂದ ಕರೆ ನೀಡಿದ್ದ ಬೃಹತ್ ಚಳವಳಿಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಎಂದು ಸರ್ವೋದಯ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ಅರಕೆರೆ ಹೇಳಿದರು.
ಬೇಡಿಕೆ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಮಾ.8ರಂದು ಸಿಎಂ ಅವರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಮಾತ್ರವಲ್ಲದೆ ಸಮಸ್ಯೆಗಳಿಗೆ ತಕ್ಷಣವೇ ಕ್ರಮ ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಮುಖವಾಗಿ ಪ್ರತಿ ಟನ್ 4500 ರೂ ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ ನಿಗದಿ ಮಾಡಬೇಕೆನ್ನುವ ಬೇಡಿಕೆ ಬಗ್ಗೆ ಪರಿಶೀಲನೆ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಆದ್ದರಿಂದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. ತೆಗೆದುಕೊಂಡಿರುವ ಕಾಲಾವಧಿಯಲ್ಲಿ ಸಮಸ್ಯೆ ಬಗೆಹರಿಸಿದ್ದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಷಾ ರಾಜ್ಯಕ್ಕೆ ಬಂದಾಗ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಲಿಂಗಪ್ಪಾಜಿ, ಸಂತೋಷ್, ವಿಜಯ್‌ಕುಮಾರ್, ಜಿ.ಎ.ಶಂಕರ್ ಇದ್ದರು.