

ಮಂಡ್ಯ: ತಾವು ಪ್ರತಿನಿಧಿಸುವ ಕ್ಷೇತ್ರದ ರೈತರಿಗಿಂತ ಜೆಡಿಎಸ್ ಶಾಸಕರಿಗೆ ಪಂಚರತ್ನ ಯಾತ್ರೆಯೇ ಮುಖ್ಯ ಎನ್ನುವಂತೆ ನಡೆದುಕೊಳ್ಳುತ್ತಿರುವುದು ದುರಂತ ಎಂದು ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಟೀಕಿಸಿದ್ದಾರೆ.
ಅಧಿವೇಶನ ನಡೆಯುತ್ತಿರುವ ಈ ಸಮಯದಲ್ಲಿ ಶಾಸಕರು ಸದನದಲ್ಲಿ ಸರ್ಕಾರದ ವಿರುದ್ಧ ಒಕ್ಕೊರಲಿನಿಂದ ರೈತ ಪರವಾಗಿ ಮಾತನಾಡುವುದನ್ನು ಬಿಟ್ಟು ಪಂಚರತ್ನ ಯಾತ್ರೆ ಮಾಡುವುದು ಎಷ್ಟು ಸಮಂಜಸ. ಕಳೆದ 46 ದಿನದಿಂದ ಮಂಡ್ಯ ನಗರದಲ್ಲಿ ಕಬ್ಬು, ಭತ್ತ, ರಾಗಿ ಮತ್ತು ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕೆಂದು ರೈತರು ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ. ಶಾಸಕರು ಸೌಜನ್ಯಕ್ಕಾದರೂ ಬಂದು ರೈತರನ್ನು ಮಾತನಾಡಿಸಿಲ್ಲ. ಇದೀಗ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿದ್ದರೂ ಅಲ್ಲಿಗೆ ಹೋಗದೆ ಯಾತ್ರೆಯಲ್ಲಿ ತೊಡಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇನ್ನಾದರೂ ಯಾತ್ರೆ ಮುಂದೂಡಿ ಅಧಿವೇಶನದಲ್ಲಿ ರೈತರ ಪರ ದನಿಯೆತ್ತಿ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಿಸಲು ಹೋರಾಟ ಮಾಡಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.