ಅಭಿವೃದ್ಧಿಯಲ್ಲಿ ಕುಸಿದಿರುವ ಮಂಡ್ಯ: ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಬೇಸರ

07_02_Mdy_06(Raytha Sanga)
Published on

ಮಂಡ್ಯ: ಹಾಸನ, ತುಮಕೂರು ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯ ಅಭಿವೃದ್ಧಿಯಲ್ಲಿ ತೀವ್ರ ಕುಸಿತವಾಗಿದೆ ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಬೇಸರ ವ್ಯಕ್ತಪಡಿಸಿದರು.

ನಗರದ ಹೊಸಹಳ್ಳಿಯ ಬಿಸಿಲು ಮಾರಮ್ಮ ದೇವಸ್ಥಾನದ ಆವರಣದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಮಂಡ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಆರಕ್ಕೆ ಏರಿಲ್ಲ. ಆದರೆ ಮೂರಕ್ಕಿಂತ ಕೆಳಕ್ಕೆ ಕುಸಿದಿದೆ. ಹಲವು ವರ್ಷಗಳಿಂದಲೂ ಬದಲಾವಣೆ ಕಂಡಿಲ್ಲ ಎಂದರು.

ಯುವಜನರಿಗೆ ಉದ್ಯೋಗಾವಕಾಶವಿಲ್ಲ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೂ ವಿಶೇಷ ಕಾರ್ಯಕ್ರಮಗಳ ಅನುಷ್ಠಾನವಾಗಿಲ್ಲ. ಹಕ್ಕುಪತ್ರಕ್ಕಾಗಿ ಇಂದಿಗೂ ಹಲವಾರು ಜನರು ಕಾಯುತ್ತಿದ್ದಾರೆ. ಹತ್ತು ವರ್ಷದ ಹಿಂದೆ ಹಾಸನ, ತುಮಕೂರು ಮತ್ತು ಮಂಡ್ಯ ಜಿಲ್ಲೆಯ ಒಂದೇ ಮಾದರಿಯಲ್ಲಿತ್ತು. ಆದರಿಂದು ನೋಡಿದರೆ ಆ ಎರಡು ಜಿಲ್ಲೆ ಅಭಿವೃದ್ಧಿಯತ್ತ ಸಾಗುತ್ತಿವೆ. ಮಂಡ್ಯ ಜನರಿಗೂ ಮೂಲ ಸೌಕರ್ಯ ಕಲ್ಪಿಸಲು ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ. ಶೋಚನೀಯ ಸ್ಥಿತಿಗೆ ಮಂಡ್ಯ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕೈಗಾರಿಕೆಗಳಿಲ್ಲದ ಪರಿಣಾಮ ಯುವ ಜನರು ಬೆಂಗಳೂರಿನತ್ತ ವಲಸೆ ಹೋಗುತ್ತಿದ್ದಾರೆ. ಸಿಕ್ಕ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬದುಕು ನಡೆಸುವಂತಾಗಿದೆ. ಜನಪ್ರತಿನಿಧಿಗಳ ನಿರ್ಲಕ್ಷೃದಿಂದಾಗಿ ಜನರು ಬೇಸತ್ತಿದ್ದಾರೆ. ಹಿಂದೆ ಕೊಡುಗೈ ದಾನಿಯಂತಾಗಿದ್ದ ಮಂಡ್ಯ ಇಂದು ದುರ್ಬಲ ಸ್ಥಿತಿಗೆ ಬಂದಿರುವುದು ವಿಷಾದನೀಯ. ಆದ್ದರಿಂದ ಈ ಬಾರಿ ಜನರು ಬದಲಾವಣೆ ಬಯಸಿದ್ದಾರೆ. ಅದರಂತೆ ಈ ಚುನಾವಣೆಯಲ್ಲಿ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ತಗ್ಗಳ್ಳಿ ಪ್ರಸನ್ನ, ಬೋರೇಗೌಡ, ನಾಗರಾಜು, ಅನಿಲ್, ವಿಜಯಮ್ಮ, ಮನು, ಗೋಪಿ, ಯಶ್ವಂತ್, ಮಹೇಶ್ ಸೇರಿದಂತೆ ಕೀರೆಮಡಿ ಮಹಿಳಾ ಒಕ್ಕೂಟದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net