ಕಾಂಚಾಣದ ಆಸೆಗೆ ಬಲಿಯಾಗಬೇಡಿ: ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನಗೌಡ ಸಲಹೆ

mandya
Published on

ಮಂಡ್ಯ: ಚುನಾವಣೆಗಳು ಬಂತೆಂದರೆ ಕುರುಡು ಕಾಂಚಾಣ ತನ್ನ ರುದ್ರನರ್ತನವನ್ನು ಮಾಡುತ್ತದೆ ಎಂದು ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕೆರೆ ಪ್ರಸನ್ನಗೌಡ ಹೇಳಿದರು.

ತಾಲೂಕಿನ ಹುಲಿವಾನ ಗ್ರಾಮದಲ್ಲಿ ಆಯೋಜಿಸಿದ್ದ ಮಧುಚಂದನ್ ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದರು. ಕಾಂಚಣದಾಸೆಗೆ ಬಲಿಯಾಗಿ ನಮ್ಮ ಭವಿಷ್ಯ ಯುವ ಪೀಳಿಗೆಯನ್ನು ಅಂಧಕಾರಕ್ಕೆ ತಳ್ಳುವ ಕೆಲಸ ಮಾಡದಿರೋಣ. ಉತ್ತಮರನ್ನು ಸಮಾಜದ ಸಮಸ್ಯೆಗಳ ಬಗ್ಗೆ ಅರಿವಿರುವವ ಹೋರಾಟದ ಹಿನ್ನೆಲೆ ಹೊಂದಿರುವ ಮಧುಚಂದನ್ ಅವರನ್ನು ಆಯ್ಕೆ ಮಾಡೋಣ ಎಂದರು.

ಅಭ್ಯರ್ಥಿ ಎಸ್.ಸಿ.ಮಧುಚಂದನ್ ಮಾತನಾಡಿ, ಚುನಾವಣಾ ವ್ಯವಸ್ಥೆಯಲ್ಲಿ ರೈತರು, ಕೂಲಿಕಾರ್ಮಿಕರು, ಪದವೀಧರರು, ಹಾಲು ಉತ್ಪಾದಕರ ಸಮಸ್ಯೆಗಳು ತಳಮಟ್ಟದಿಂದ ಅರಿವಿರುತ್ತದೋ ಅಂತಹವರನ್ನು ಗುರುತಿಸಿ ಮತ ಹಾಕಬೇಕು. ಮಧ್ಯಮ ವರ್ಗದ ಜನರ ಬವಣೆಗಳನ್ನು ಅರಿತವನಾಗಿದ್ದೇನೆ. ಈ ಬಾರಿ ಒಮ್ಮೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ರೈತ ಮಹಿಳೆ ಉಪ್ಪಾರಕನಹಳ್ಳಿ ಕೆಂಪಮ್ಮ ಮಾತನಾಡಿ, ಓದಿರೋ ಮಕ್ಕಳಿಗೆ ಕೆಲಸ ಸಿಗುತ್ತಿಲ್ಲ, ವ್ಯವಸಾಯ ಮಾಡುತ್ತಿರುವ ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ. ಕೃಷಿಗೆ ಬೇಕಾದ ಅಗತ್ಯ ವಸ್ತುಗಳ ಬೆಲೆ ಮಾತ್ರ ಪ್ರತಿ ವರ್ಷ ಜಾಸ್ತಿ ಆಗುತ್ತಿದೆ. ಆದರೆ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಇನ್ನಾದರೂ ಹಣ, ಹೆಂಡಕ್ಕೆ ತಮ್ಮ ಮತಗಳನ್ನು ಮಾರಿಕೊಳ್ಳಬೇಡಿ ಎಂದರು.

ರೈತ ಸಂಘದ ರಾಜ್ಯ ಖಜಾಂಚಿ ತಗ್ಗಳ್ಳಿ ಪ್ರಸನ್ನ, ಮುಖಂಡರಾದ ಹುಲಿವಾನ ಜಗದೀಶ್, ರವಿ, ರಂಗಶೆಟ್ರು, ಮಂಜುನಾಥ್, ಮಾರಗೌಡನಹಳ್ಳಿ ನಿಂಗೇಗೌಡ, ಕಾಂತರಾಜು, ಮರಿಲಿಂಗನದೊಡ್ಡಿ ಲಕ್ಷ್ಮೀನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net