ಸಮಾನ ಬದುಕು ಕೊಡಿಸಲು ಹೋರಾಟ: ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿಕೆ

Raytha Sanga
Published on

ಮಂಡ್ಯ: ರೈತ ಸಂಘ ಕೇವಲ ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ಮಾಡುವುದಿಲ್ಲ. ಸಮಾಜವನ್ನು ಬದಲಾವಣೆ ಮಾಡುವುದು, ನೊಂದವರಿಗೆ ದನಿಯಾಗುವುದು, ಎಲ್ಲರೂ ಸಮಾನವಾಗಿ ಬದುಕುವುದು, ನ್ಯಾಯ ಸಿಗುವಂತೆ ಮಾಡಲು ಹೋರಾಟ ಮಾಡಿ ಯಶಸ್ವಿಯಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ ಹೇಳಿದರು.

ನಗರದ ಬೀಡಿ ಕಾಲನಿಯಲ್ಲಿ ಭಾನುವಾರ ಆಯೋಜಿಸಿದ್ದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಮಧುಚಂದನ್ ಪರ ಬಹಿರಂಗ ಮತಯಾಚನೆ ಸಭೆಯಲ್ಲಿ ಮಾತನಾಡಿದರು. ರೈತ ಸಂಘ ಬೀದಿ ಹೋರಾಟದ ಮೂಲಕವೇ ಸರ್ಕಾರದ ಕಣ್ಣು ತೆರೆಸಿದ್ದೇವೆ. ಅದರಲ್ಲಿ ನಂಜುಂಡಸ್ವಾಮಿ ಹಾಗೂ ಪುಟ್ಟಣ್ಣಯ್ಯ ಅವರು ಶಾಸಕರಾಗಿ ಹೋಗಿದ್ದಾಗಲೂ ಕೂಡ ಹಲವು ಬದಲಾವಣೆಗಳು ಎಲ್ಲ ಧರ್ಮದವರಿಗೂ ಸಿಕ್ಕಿರುವುದರ ಜತೆಗೆ ದಕ್ಕಿದೆ. ಇಂದು ಜನ ಸೇರಿಸಲು ಬೇರೆ ಪಕ್ಷದವರು ಹಣದ ಹೊಳೆಯನ್ನು ಹರಿಸಿದ್ದಾರೆ. ಆದರೆ ರೈತ ಸಂಘ ಹಾಗೂ ಮಧುಚಂದನ್ ಅವರ ಮೇಲಿನ ಪ್ರೀತಿಯಿಂದ ಸ್ವಯಂ ಪ್ರೇರಿತವಾಗಿ ಬಂದಿರುವುದು ಸಂತೋಷದ ವಿಷಯ ಎಂದು ಶ್ಲಾಘಿಸಿದರು.

ಮಧುಚಂದನ್ ಅವರು ಅಮೆರಿಕಾದಲ್ಲಿ ಕಂಪನಿ ನಡೆಸುತ್ತಿದ್ದರು. ಇವರು ಇಲ್ಲಿಗೆ ಬಂದಿರುವುದು ಹಣ ಸಂಪಾದನೆಗಲ್ಲ, ಬದಲಿಗೆ ಜನರ ಸೇವೆ ಮಾಡಲು ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಇವರು ಶಾಸಕರಾಗಿ ಬಂದರೆ ನೀವು ಅವರನ್ನು ಹುಡುಕಿಕೊಂಡು ಹೋಗಬೇಕಿಲ್ಲ. ಅವರೇ ನಿಮ್ಮ ಬಳಿಗೆ ಬಂದು ಸಮಸ್ಯೆ ಕೇಳಿ ಬಗೆಹರಿಸುವಂತಹ ಶ್ರಮಜೀವಿ ಹಾಗೂ ಬುದ್ಧಿಜೀವಿ ಆಗಿದ್ದಾರೆ. ಬಂಡವಾಳ ಹಾಕಿ ಬಂಡವಾಳ ತೆಗೆಯುವ ಮನಸ್ಥಿತಿ ಇವರಿಗಿಲ್ಲ ಎಂಬುದನ್ನು ಅರಿತು ಇವರಿಗೆ ಮತ ನೀಡುವ ಮೂಲಕ ಬಹುದೊಡ್ಡ ಗೆಲುವು ತಂದು ಕೊಡಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿ ಮಧುಚಂದನ್ ಮಾತನಾಡಿ, ಮುಸ್ಲಿಂ ಮೀಸಲಾತಿಯನ್ನು ಕಿತ್ತುಹಾಕಿರುವ ಸರ್ಕಾರದ ನಡೆಯನ್ನು ಖಂಡಿಸಿದ್ದೇವೆ. ಮುಸ್ಲಿಂರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ನಿಮ್ಮ ಸೌಲಭ್ಯ ಮತ್ತೆ ಮರಳಿ ಪಡೆಯುವ ಹೋರಾಟ ಮಾಡಲು ಮತ ನೀಡುವ ಮೂಲಕ ಶಕ್ತಿ ನೀಡಬೇಕು. ನಾವು ಬೀಡಿ ಕಾಲನಿಯಲ್ಲಿ ಸಭೆ ಮಾಡಲು ಕಾರಣವಿದೆ. ಎಲ್ಲ ಸಮಾವೇಶಗಳು ಶ್ರೀಮಂತರ ಸ್ಥಳದಲ್ಲಿ ಮಾಡುತ್ತಾರೆಯೇ ಹೊರತು ಬಡವರ ಸ್ಥಳದಲ್ಲಿ ನಡೆಯಲ್ಲ. ಆದರೆ ನಾನು ಇದಕ್ಕೆ ವಿರುದ್ಧವಾಗಿ ಬಡವರು ಇರುವ ಕಡೆ ಸಭೆ ನಡೆಸುತ್ತಿದ್ದೇನೆ. ನೀವು ಆಶೀರ್ವಾದ ಮಾಡಿ ಗೆಲ್ಲಿಸಿದರೆ ಇಲ್ಲಿಂದಲೇ ಕೆಲಸ ಪ್ರಾರಂಭ ಮಾಡುತ್ತೇನೆ ಎಂದರು.

ಸಭೆಯಲ್ಲಿ ಸರ್ವೋದಯ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ, ರೈತ ಮುಖಂಡರಾದ ಹೊಸಕೋಟೆ ಬಸವರಾಜು, ಬಳ್ಳಾರಿ ಎಂಎಲ್‌ಕೆ ನಾಯ್ಡು, ಮುಸ್ತಾರ್ ಅಹಮದ್, ಅಯೂಬ್, ರಿಯಾಜ್, ನಾಗೇಂದ್ರ, ಪಾಷ, ಡಾ.ಸಿದ್ದಾರ್ಥ, ಭೂಮಿಕಾ, ದರ್ಶನ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net