

ಮಂಡ್ಯ: ನಗರದ ಪ್ರತಿಷ್ಠಿತ ರೈತ ಸಭಾಂಗಣಕ್ಕೆ ನವೀಕರಣಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. ಇದರೊಂದಿಗೆ ಹಲವು ವರ್ಷದ ಕನಸು ನನಸಾದಂತಾಗಿದೆ.
ಐದು ಕೋಟಿ ರೂ ವೆಚ್ಚದಲ್ಲಿ ರೈತ ಸಭಾಂಗಣದ ನವೀಕರಣ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಇದು ಹಲವು ವರ್ಷದ ಬೇಡಿಕೆಯಾಗಿತ್ತು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ರೈತಸಭಾಂಗಣ ನವೀಕರಣದ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಪ್ರಸ್ತಾಪಿಸಿದ್ದರು. ಜತೆಗೆ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಆರ್‌ಪಿಸಿಎಂಎಸ್ ಆಡಳಿತ ಮಂಡಳಿಯೂ ಎಚ್‌ಡಿಕೆ ಅವರಿಗೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವ, ಸಿಎಸ್‌ಆರ್ ನಿಧಿಯ ಮೂಲಕ 5 ಕೋಟಿ ರೂ ಕೊಡಿಸಿದ್ದಾರೆ.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, 1947ರಲ್ಲಿ ರೈತಸಭಾಂಗಣ ನಿರ್ಮಾಣಗೊಂಡಿದೆ. ನಿತ್ಯಸಚಿವ ಕೆ.ವಿ.ಶಂಕರಗೌಡ ಮತ್ತು ಮಾಜಿ ಶಾಸಕ ಜಿ.ಎಸ್.ಬೊಮ್ಮೇಗೌಡರ ಮತ್ತವರ ಸ್ನೇಹಬಳಗದ ಪ್ರಯತ್ನದ ಫಲವಾಗಿ ರೈತ ಸಭಾಂಗಣ ನಿರ್ಮಾಣವಾಗಿದೆ. ಪ್ರಸ್ತುತ ಸಭಾಂಗಣಕ್ಕೆ 75 ರಿಂದ 80 ವರ್ಷವಾಗಿದ್ದು, ಕಟ್ಟಡ ಶಿಥಿಲವಾಗಿದೆ. ಈ ಹಿನ್ನಲೆಯಲ್ಲಿ ರೈತಸಭಾಂಗಣವನ್ನು ಹೊಸ ವಿನ್ಯಾಸದೊಂದಿಗೆ ನವೀಕರಿಸಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ನವೀಕೃತ ರೈತಸಭಾಂಗಣದ ನೀಲನಕ್ಷೆಯೂ ತಯಾರಾಗಿದ್ದು, ನಿಗದಿತ ಕಾಲಾವಧಿಯೊಳಗೆ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ, ನವೀಕೃತ ಕಟ್ಟಡವನ್ನು ಉದ್ಘಾಟಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಕಾಮಗಾರಿಯೂ ಗುಣಮಟ್ಟದಿಂದ ಕೂಡಿರಲಿದೆ. ಸಭಾಂಗಣ ಹೆಚ್ಚು ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಕೆಲಸ ನಡೆಯಲಿದೆ ಎಂದರು.
ಆರ್‌ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯರಾದ ಮಧು ಮಾದೇಗೌಡ, ಕೆ.ವಿವೇಕಾನಂದ, ಮಾಜಿ ಶಾಸಕರಾದ ಜಿ.ಬಿ.ಶಿವಕುಮಾರ್, ಡಾ.ಕೆ.ಅನ್ನದಾನಿ, ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಆರ್‌ಎಪಿಸಿಎಂಎಸ್ ನಿರ್ದೇಶಕರಾದ ಬೇಲೂರು ಸೋಮಶೇಖರ್, ಯೋಗೇಶ್, ಕೆ.ಸಿ.ರವೀಂದ್ರ, ಅಂಜನಾ ಶ್ರೀಕಾಂತ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಲಹಳ್ಳಿ ಅಶೋಕ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಯಪ್ರಕಾಶ್ ಇತರರಿದ್ದರು.