19ರಂದು ಮಂಡ್ಯ ನಗರ ಬಂದ್: ಕರೆ ಕೊಟ್ಟ ಜಿಲ್ಲಾ ರೈತ ಸಂಘ

10_12_Mdy_02(Raytha Sanga)
Published on
ಮಂಡ್ಯ: ಪ್ರತಿ ಟನ್ ಕಬ್ಬಿಗೆ 4,500 ರೂ ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ ನಿಗದಿ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶನಿವಾರ 34ನೇ ದಿನ ಪೂರೈಸಿದೆ. ಇತ್ತ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದರೂ ನಿರ್ಲಕ್ಷೃ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿರುವ ರೈತ ಸಂಘದ ಕಾರ್ಯಕರ್ತರು ಡಿ.19ರಂದು ಮಂಡ್ಯ ನಗರ ಬಂದ್‌ಗೆ ಕರೆ ನೀಡಿದೆ.
ಈ ಕುರಿತು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಹಾಗೂ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಹಲವು ಬಾರಿ ಎಚ್ಚರಿಕೆ ನೀಡಿದರೂ ಸರ್ಕಾರ ರೈತರ ಮನವಿಗೆ ಸ್ಪಂದಿಸುತ್ತಿಲ್ಲ. ಸಿಹಿ ಸುದ್ದಿ ಕೊಡುತ್ತೇವೆಂದು ಹೇಳಿ ಕಾಲ ದೂಡುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ಮಂಡ್ಯ ನಗರ ಬಂದ್‌ಗೆ ಕರೆ ನೀಡಲಾಗಿದೆ. ಇದಕ್ಕೆ ವ್ಯಾಪಾರಸ್ಥರು, ವಾಹನ ಚಾಲಕರು ಮತ್ತು ಮಾಲೀಕರು, ಹೋಟೆಲ್ ಮಾಲೀಕರು ಸೇರಿದಂತೆ ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಆದ್ದರಿಂದ ಅಂದು ಬೆಳಗ್ಗೆಯಿಂದ ಮಧ್ಯಾಹ್ನ 2ಗಂಟೆವರೆಗೆ ಬಂದ್ ಮಾಡಲಾಗುವುದು. ಸಾರ್ವಜನಿಕರಿಗೆ ಅನಾನೂಕೂಲವಾಗಬಾರದೆಂದು ಸಮಯವನ್ನು ಮಧ್ಯಾಹ್ನಕ್ಕೆ ಸೀಮಿತಗೊಳಿಸಲಾಗಿದೆ. ಇನ್ನು ಇದಕ್ಕೆ ಪೂರ್ವಭಾವಿಯಾಗಿ ಮೂರ‌್ನಾಲ್ಕು ದಿನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮರಾಜನಗರ ಜಿಲ್ಲೆ ಹನೂರಿಗೆ ಬರಲಿದ್ದಾರೆ. ಅಲ್ಲಿ ಸುಮಾರು ಐದು ಸಾವಿರ ಜನರೊಂದಿಗೆ ಪ್ರತಿಭಟನೆ ಮಾಡಲಾಗುವುದು. ಇದಕ್ಕೆ ಜಿಲ್ಲೆಯಿಂದಲೂ ಕಾರ್ಯಕರ್ತರು ತೆರಳಲಿದ್ದಾರೆ ಎಂದು ವಿವರಿಸಿದರು.
ಕಬ್ಬಿನ ಉತ್ಪನ್ನಗಳಿಂದ ಮದ್ಯ ತಯಾರು ಮಾಡಲಾಗುತ್ತಿದೆ. ಪ್ರತಿ ಟನ್ ಕಬ್ಬಿನಿಂದ ಸುಮಾರು 60 ಲೀಟರ್ ಮದ್ಯವನ್ನು ಉತ್ಪಾದನೆ ಮಾಡಲಾಗುತ್ತಿದ್ದು, ವಾರ್ಷಿಕ ಅಂದಾಜು 30 ಸಾವಿರ ಕೋಟಿ ರೂ ಸರ್ಕಾರಕ್ಕೆ ಆದಾಯ ಬರುತ್ತಿದೆ. ಇದರಲ್ಲಿ ಶೇ.10ರಷ್ಟು ಲಾಭವನ್ನು ಕೊಟ್ಟರೂ ರೈತರಿಗೆ ಅನುಕೂಲವಾಗಲಿದೆ. ಆದರೆ ಸರ್ಕಾರಕ್ಕೆ ರೈತರಿಗೆ ಒಳ್ಳೆಯದಾಗುವುದು ಬೇಕಿಲ್ಲ. ಹಾಲಿಗೆ 40 ರೂ ನಿಗದಿ ಮಾಡುವಂತೆ ನಾವು ಒತ್ತಾಯಿಸಿದ್ದೇವೆ. ಆದರೆ ಎರಡು ರೂ ಹೆಚ್ಚಿಸಲಾಗಿದೆ. ಇತ್ತ ಎಥೆನಾಲ್ ಲಾಭದಲ್ಲಿ ಪ್ರತಿ ಟನ್‌ಗೆ 50 ರೂಗಳನ್ನು ರೈತರಿಗೆ ನೀಡಲಾಗುವುದೆಂದು ಹೇಳಲಾಗಿದೆ. ರೈತರನ್ನು ಭಿಕ್ಷಕರು ಎಂದುಕೊಂಡಿದ್ದೀರಾ?. ಇಷ್ಟೊಂದು ಕಡೆಗಣನೆ ಮಾಡುವುದು ಒಳ್ಳೆಯದಲ್ಲ. ಇಂದಿನ ದಿನದಲ್ಲಿ ಕೃಷಿಗೆ ತಗಲುತ್ತಿರುವ ವೆಚ್ಚಕ್ಕೆ ಸರಿಯಾದ ಆದಾಯವೂ ಬರುತ್ತಿಲ್ಲ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಬಳ್ಳಾರಿ ರೈತ ಸಂಘದ ಅಧ್ಯಕ್ಷ ಎಂಎನ್‌ಕೆ ನಾಯ್ಡು, ಮಂಡ್ಯ ರೈತ ಸಂಘದ ಲಿಂಗಪ್ಪಾಜಿ, ಶಿವಳ್ಳಿ ಚಂದ್ರು, ರಾಮಕೃಷ್ಣ, ಪ್ರಕಾಶ್ ಹರವು, ಅಕ್ಕಿಗಿರಣಿ ಮಾಲೀಕರ ಸಂಘದ ಶಂಕರೇಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net