

ಮಂಡ್ಯ: ಪ್ರತಿ ಟನ್ ಕಬ್ಬಿಗೆ 4,500 ರೂ. ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ. ನಿಗದಿಗೆ ಒತ್ತಾಯಿಸಿ ರೈತ ಸಂಘದಿಂದ ಸರ್ ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಗುರುವಾರ 32ನೇ ದಿನ ಪೂರೈಸಿತು.
ಧರಣಿ ಬೆಂಬಲಿಸಿ ಜಿ.ಹೊಸಹಳ್ಳಿ, ಬಸರಾಳು, ಉಪ್ಪಾರಕನಹಳ್ಳಿ ಗ್ರಾಮಸ್ಥರು, ಲಾರಿ ಮಾಲೀಕರ ಸಂಘ ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದವು. ಮಾತ್ರವಲ್ಲದೇ, ಧರಣಿ ಒಂದು ತಿಂಗಳು ಪೂರೈಸಿದರೂ ನಿರ್ಲಕ್ಷಿಸುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಜಿಲ್ಲೆಯ ಯುವ ರೈತರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ನಗರದಲ್ಲಿ ಕಳೆದ 32 ದಿನದಿಂದ ಕಬ್ಬು, ಭತ್ತ, ರಾಗಿ ಮತ್ತು ಹಾಲಿಗೆ ಸರಿಯಾದ ವೈಜ್ಞಾನಿಕ ಬೆಲೆ ಕೊಡಿ ಎಂದು ನಿರಂತರವಾಗಿ ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ನಮ್ಮನಾಳುವ ಸರ್ಕಾರಗಳು ರೈತರನ್ನು ಈ ಹಿಂದಿನಿಂದಲೂ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಹೇಗೆಲ್ಲ ಕಡೆಗಣಿಸಬೇಕು ಅಥವಾ ಹಣಿಯಬೇಕೋ ಅದನ್ನು ವ್ಯವಸ್ಥಿತವಾಗಿ ಮಾಡುತ್ತಾ ಬಂದಿದ್ದಾರೆ ಎಂದು ದೂರಿದ್ದಾರೆ.
ಕಬ್ಬಿಗೆ ನಾವು ಕೇಳಿದ್ದು ನಾಲ್ಕೂವರೆ ಸಾವಿರ ರೂ. ಮಾತ್ರ. ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ನಡೆದಂತಹ ಹೋರಾಟಕ್ಕೆ ಅವರು ಹೆಚ್ಚಿಸಿದ್ದು 50 ರೂ. ಮಾತ್ರ. ಹಾಲಿಗೆ ನಾವು ಕೇಳಿದ್ದು 40 ರೂ. ಅವರು ಹೆಚ್ಚಿಗೆ ಮಾಡಿರುವುದು 2 ರೂ ಮಾತ್ರ. ಈ ರೀತಿ ರೈತರಿಗೆ ಕನಿಷ್ಠ ಆಸೆ ತೋರಿಸಿ ತೃಪ್ತಿಪಡಿಸುವ ಕೆಲಸವನ್ನು ಎಲ್ಲ ಸರ್ಕಾರಗಳು ಮಾಡುತ್ತ ಬಂದಿವೆ. ಇಂದಿನ ಯುವ ರೈತರು ಮೂರು ಎಕರೆಯಲ್ಲಿ ವರ್ಷವಿಡೀ ಕಷ್ಟಪಟ್ಟು ಕೆಲಸ ಮಾಡಿ ಕಬ್ಬು ಬೆಳೆದರೆ ತನ್ನ ಒಂದು ಮಗುವನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಿ ಓದಿಸಲು ಸಹ ಸಾಧ್ಯವಾಗುವುದಿಲ್ಲ. ಪರಿಸ್ಥಿತಿ ಈಗಿರುವಾಗ ಈಗ ಎಚ್ಚೆತ್ತುಕೊಳ್ಳದಿದ್ದರೆ, ಈಗ ನಿಮ್ಮ ಧ್ವನಿ ಆಚೆ ಬರದಿದ್ದರೆ ಮತ್ಯಾವಾಗ ಕೇಳುತ್ತೀರಿ?. ಸಮಸ್ತ ರೈತ ಸಂಕುಲ ಒಂದಾಗಿ ನಮಗೆ ಬೇಕಾದ ವೈಜ್ಞಾನಿಕ ಬೆಲೆಯನ್ನು ಪಡೆಯೋಣ. ನಂತರ ನಿಮಗೆ ಬೇಕಾದ ಪಕ್ಷಗಳನ್ನು ನೀವು ಬೆಂಬಲಿಸಿ. ಇಲ್ಲದ್ದಕ್ಕಾಗಿ ತಲೆ ಕೆಡಿಸಿಕೊಂಡು ತಮ್ಮ ಸಮಯವನ್ನು ಹಾಳು ಮಾಡಿಕೊಳ್ಳುತ್ತಿರುವ ಯುವಕರು ಹೋರಾಟದ ಮಹತ್ವ ಅರಿತುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.