ರಾಜ್ಯ ಸರ್ಕಾರದಿಂದ ರೈತರಿಗೆ ಅನ್ಯಾಯ: ಹಿತರಕ್ಷಣಾ ಸಮಿತಿಯಿಂದ 16ನೇ ವಾರದ ಪ್ರತಿಭಟನೆ

Raytha Protest Mandya
oppo_0
Published on

ಮಂಡ್ಯ: ರಾಜ್ಯಸರ್ಕಾರದ ನಿರ್ಧಾರಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಹಾಗೂ ರೈತರ ಕುಂದು ಕೊರತೆಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿ ತಕ್ಷಣವೇ ಸಭೆ ಕರೆಯಬೇಕೆಂದು ಒತ್ತಾಯಿಸಿ ನಗರದಲ್ಲಿ ಜಿಲ್ಲಾ ರೈತಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕಾವೇರಿ ನದಿ ನೀರಿನ ವಿಷಯದ ಕೇಂದ್ರ ಹಾಗೂ ರಾಜ್ಯಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಆಯೋಜಿಸಿದ್ದ 16ನೇ ಸೋಮವಾರದ ಪ್ರತಿಭಟನೆಯಲ್ಲಿ ಬೇಡಿಕೆಗೆ ಈಡೇರಿಕೆಗೆ ಒತ್ತಾಯಿಸಿ ೋಷಣೆ ಕೂಗಲಾಯಿತು.

ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಸ್ವಲ್ಪ ಮಳೆಯಿಂದ ರೈತರಿಗೆ ಆಶಾಭಾವನೆ ಬಂದಿದೆ. ಕೆಆರ್‌ಎಸ್‌ಗೆ 1 ಅಡಿ ನೀರು ಬಂದಿದೆ. ಬೆಳೆ ಒಡ್ಡುವ ಬಗ್ಗೆ ರೈತರ ಚಿಂತನೆ ಇದೆ. ಭತ್ತ ಒಟ್ಲು ಹಾಕಬೇಕಿದೆ. ಜಿಲ್ಲಾಡಳಿತ ಸುಮ್ಮನೆ ಕೂರದೇ ರೈತರ ಸಾಲದ ಸೌಲಭ್ಯ, ರಸಗೊಬ್ಬರದ ವಿತರಣೆ, ಮತ್ತೆ ಬೆಳೆ ಒಡ್ಡುವ ವಿಚಾರ, ಕೆಆರ್‌ಎಸ್ ನೀರಿನ ವಿಚಾರ ಇವೆಲ್ಲವೂ ಕೂಡ ಗಂಭೀರವಾದ ವಿಷಯಗಳು ಇದನ್ನು ಚರ್ಚಿಸಲು ತುರ್ತು ಸಭೆ ಕರೆಯಬೇಕಾಗಿದೆ ಎಂದರು.

ರಾಜ್ಯ ಸರ್ಕಾರ ಕಾವೇರಿ ನೀರಿನ ವಿಷಯದ ಬಗ್ಗೆ ಯಾವ ಗಂಭೀರ ಚಿಂತನೆಯನ್ನು ಕೂಡ ಮಾಡಿಲ್ಲ. ಸರ್ಕಾರ ರಚನೆಯಾಗಿ ಇವತ್ತಿಗೆ ಒಂದು ವರ್ಷ ಆಗಿದೆ. ಕಾವೇರಿ ಕೊಳ್ಳದ ಅಣೆಕಟ್ಟೆಯ ಕೆಳಭಾಗದ 8 ಜಿಲ್ಲೆಗಳ ಪರಿಸ್ಥಿತಿ ಒಳಪಟ್ಟಂತೆ ಚರ್ಚೆ ಮಾಡಿಲ್ಲ. ಈ ವಿಷಯಕ್ಕೆ ಜಂಟಿ ಅಧಿವೇಶನವನ್ನು ಕರೆದು ಒಮ್ಮೆಯಾದರೂ ಕೂಡ ಚರ್ಚೆ ಮಾಡಿಲ್ಲ. ನಾಲೆಗಳ ದುರಸ್ತಿ ನೆಪವೊಡ್ಡಿ ಬೆಳೆಯನ್ನು ಹಾಕಬೇಡಿ ಎಂದು ಹೇಳಿದ ಸರ್ಕಾರ ಕಬ್ಬು, ಭತ್ತದ ಕಣಜವಾಗಿರುವ ಮಂಡ್ಯ ಹಾಗೂ ಎಂಟು ಜಿಲ್ಲೆಗಳ ರೈತರಿಗೆ ದ್ರೋಹ ಮಾಡಿದೆ. ಕಬ್ಬು ಮತ್ತು ಭತ್ತಕ್ಕೆ ಸಮರ್ಪಕವಾಗಿ ನೀರು ಸಾಲುತ್ತಿತ್ತು. ಅದರ ಜತೆಗೆ ಮಳೆ ಸೇರಿಕೊಂಡು ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ ಕಾವೇರಿ ನದಿ ನೀರಿನ ಪ್ರಾಧಿಕಾರದ ಆದೇಶಗಳು ಮಾರಕವಾಗಿ ಬಂತು. ಈ ಎಲ್ಲ ಕಾರಣಗಳಿಂದ ನಾವು ಬೆಳೆ ನಷ್ಟವನ್ನು ಹೊಂದಿದ್ದೇವೆ ಎಂದು ವಿವರಿಸಿದರು.

ಬೆಳೆ ಹಾಕದಿರುವ ರೈತರಿಗೆ ಪರಿಹಾರ ಇಲ್ಲವೆಂದು ರಾಜ್ಯಸರ್ಕಾರ ಹೇಳುತ್ತಿದೆ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಕಾರಣ ಬೆಳೆೆಹಾಕಬೇಡಿ ಎಂದು ಹೇಳಿದ ಸರ್ಕಾರ, ಪರಿಹಾರ ಕೊಡಲ್ಲವೆಂದು ಹೇಳುತ್ತಿರುವುದು ಎಷ್ಟು ಸರಿ. ರೈತರ ಕನಸನ್ನು ಭಗ್ನ ಮಾಡುವ ಕೆಲಸ ಮಾಡಬೇಡಿ. ನಿಮ್ಮ ಮುಂದೆ ರಾಜ್ಯದ ರೈತರು, ಕಾರ್ಮಿಕರು ಹಾಗೂ ಮಹಿಳೆಯರ ರಕ್ಷಣೆ ಇದೆ. ಜವಾಬ್ದಾರಿಯುತವಾಗಿ ಸರ್ಕಾರ ನಡೆಸಿ. ನಿಮ್ಮ ನಿರ್ಲಕ್ಷ್ಯ ಧೋರಣೆ ಹೀಗೇ ಮುಂದುವರೆದರೆ ನಾವು ಬೇರೆ ರೀತಿಯ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನೀರಿನ ಸಂಗ್ರಹದ ಬಗ್ಗೆ ರೈತರಿಗೆ ಏಕೆ ಮಾಹಿತಿ ನೀಡಲಿಲ್ಲ. ವಾಸ್ತವ ವಿಷಯ ತಿಳಿಸಿ. ನಾವು ಆಮೇಲೆ ಸರ್ಕಾರಕ್ಕೆ ಒತ್ತಡ ತರುತ್ತೇವೆ. ಸರ್ಕಾರದ ಜವಾಬ್ದಾರಿ ಈ ಎಲ್ಲ ವಿಷಯಗಳಲ್ಲೂ ಮುಖ್ಯವಾಗಿದೆ ಎಂದರು.

ಪ್ರತಿಭಟನೆಯಲ್ಲಿ ರೈತ ಸಂಘಟನೆಯ ಇಂಡುವಾಳು ಚಂದ್ರಶೇಖರ್, ಕೆ.ಬೋರಯ್ಯ, ಬೋರಲಿಂಗೇಗೌಡ, ಜೈ ಕರ್ನಾಟಕ ಪರಿಷತ್ತಿನ ಎಸ್.ನಾರಾಯಣ್, ಮಾನವ ಹಕ್ಕು ಸಂಘಟನೆಯ ತುಳಸೀಧರ್, ಪತ್ರಕರ್ತ ಎ.ಎಲ್.ಬಸವೇಗೌಡ, ಎಸ್ಸಿ ಎಸ್ಟಿ ನೌಕರರ ಸಂಘಟನೆಯ ಅಧ್ಯಕ್ಷ ಗುರುಮೂರ್ತಿ, ಮಹಿಳಾ ಸಂಘಟನೆಯ ಕೋಮಲ, ದೇವೀರಮ್ಮ, ಫಯಾಜ್ ಇತರರಿದ್ದರು.

ಪ್ರತಿಭಟನೆಯಲ್ಲಿ ಸರ್ಕಾರದ ಬಗ್ಗೆ ಧಿಕ್ಕಾರದ ಘೋಷಣೆಗಳನ್ನು ಕೂಗಿದರಲ್ಲದೇ, ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ಸಾರಿಗೆ ಬಸ್‌ಗಳನ್ನು ತಡೆಹಿಡಿದು ಪ್ರಯಾಣಿಕರಿಗೆ ಕರಪತ್ರ ಹಂಚಿ ಜಾಗೃತಿ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net